ಹುಬ್ಬಳ್ಳಿ : 'ಸ್ಟಾರ್ಟ್'ಅಪ್ ಕೇಂದ್ರಗಳು ಬೆಂಗಳೂರು ಕೇಂದ್ರೀಕೃತವಾಗಿದ್ದು, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಪ್ರಾದೇಶಿಕ ಕಚೇರಿ ತೆರೆದು ಅವುಗಳನ್ನು ವಿಸ್ತರಿಸಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾಲೇಜಿನ 75ನೇ ವರ್ಷಾಚರಣೆ ಮತ್ತು ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.
'ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಹೆಚ್ಚಾಗಿ ಬೆಂಗಳೂರಿನಲ್ಲಿಯೇ ಇವೆ. ಇದರಿಂದಾಗಿ ಬೆಂಗಳೂರು ಐಟಿ, ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಬೆಳೆಯುತ್ತಿದೆ. ರಾಜ್ಯದ ಇತರ ನಗರಗಳಲ್ಲಿಯೂ ಈ ಕೇಂದ್ರಗಳು ಜಾಸ್ತಿಯಾದರೆ, ಕೃಷಿ, ಕೈಗಾರಿಕೆ, ಆಹಾರ ಕ್ಷೇತ್ರಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾರ್ಯಪಡೆಯೊಂದನ್ನು ರಚಿಸಿ, ಅದಕ್ಕೆ ಬಿವಿವಿ ಎಂಜಿನಿಯರಿಂಗ್ ಕಾಲೇಜಿನ ಕುಲಪತಿ ಅಶೋಕ ಶೆಟ್ಟರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗುವುದು' ಎಂದರು.
ಸಚಿವ ಮುರುಗೇಶ ನಿರಾಣಿ, ಶಂಕರಪಾಟೀಲ ಮುನೇನಕೊಪ್ಪ, ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕುಲಪತಿ ಅಶೋಕ ಶೆಟ್ಟರ್ ಇದ್ದರು.