ಗಣಿಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮಧ್ಯರಾತ್ರಿವರೆಗೆ ವಿಚಾರಣೆಗೆ ಒಳಪಡಿಸಲಾಗಿತ್ತು. ಇಂದು ಬೆಳಿಗ್ಗೆ 9 ರಿಂದ ವಿಚಾರಣೆ ಮುಂದುವರೆಸಿದ್ದ ಡಿಸಿಪಿ ಗಿರೀಶ್ ನೇತೃತ್ವದ ತನಿಖಾಧಿಕಾರಿಗಳ ತಂಡ, ಡೀಲ್ ಪ್ರಕರಣದ ಪೂರಕ ದಾಖಲೆಗಳು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ರೆಡ್ಡಿ ಅವರನ್ನು ಬಂಧಿಸಿದರು.
ಶೀಘ್ರವೇ ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಸಿಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣ ಸಂಬಂಧ ರೆಡ್ಡಿಯಿಂದ ಹೇಳಿಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ರೆಡ್ಡಿ ಆರೋಪಿ ಫರೀದ್ ಅವರನ್ನು ಕಳೆದ ಜನವರಿಯಲ್ಲಿ ನನಗೆ ಪರಿಚಯ ಮಾಡಿಸಲಾಯಿತು. ಈ ವೇಳೆ ಅವರು ನನ್ನೊಂದಿಗೆ ಪೋಟೋ ತೆಗೆಸಿಕೊಂಡಿದ್ದರು. ಅದಾದ ನಂತರ ಭೇಟಿಯಾಗಿರಲಿಲ್ಲ. ವ್ಯಕ್ತಿಗತವಾಗಲಿ ವ್ಯವಹಾರ ಇಟ್ಟುಕೊಂಡಿರಲಿಲ್ಲವೆಂದು ಹೇಳಿಕೆ ನೀಡಿದ್ದರು ಎನ್ನಲಾಗಿದೆ.