ಮೈಸೂರಿನ ಶ್ಯಾದನಹಳ್ಳಿಯ ಭೂಮಿಯಲ್ಲಿ ರಾಸಾಯನಿಕದಿಂದ ಬೆಂಕಿ ಹೊತ್ತಿಕೊಂಡು ಬಾಲಕನೊಬ್ಬ ಬಲಿಯಾದ ಬಳಿಕ ಪ್ರಕರಣ ಕುರಿತಂತೆ ಒಂದೊಂದೇ ವಿಷಯಗಳು ಹೊರಬರುತ್ತಿವೆ. ಸಮೀಪದಲ್ಲಿರುವ ಆರ್`ಬಿಐ ನೋಟು ಮುದ್ರಣ ಕೇಂದ್ರದ ರಾಸಾಯನಿಕ ತ್ಯಾಜ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ತಪ್ಪಿತಸ್ಥರು ಸರ್ಕಾರವೇ ಆದರೂ ಸರಿ ಕಠಿಣ ಕ್ರಮ ಜರುಗಿಸುವಂತೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ತಾನೆ ಇಲ್ಲಿನ ಆರ್`ಬಿಐ ಕೇಂದ್ರದಲ್ಲಿ ಹೊಸ ನೋಟುಗಳನ್ನ ಮುದ್ರಿಸಲಾಗಿದ್ದು, ನೋಟು ಮುದ್ರಣದ ಬಳಿಕ ಆ ರಾಸಾಯನಿಕ ತ್ಯಾಜ್ಯವನ್ನ ಎಲ್ಲಿ ಎಸೆದಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇತ್ತ, ಪ್ರದೇಶಕ್ಕೆ ಸಚಿವ ಎಚ್`.ಸಿ. ಮಹದೇವಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಸಮೀಪಕ್ಕೆ ಯಾರೂ ಬರದಂತೆ ನಿಷೇಧಾಜ್ಞೆ ವಿಧಿಸಲಾಗಿದೆ.
ಇನ್ನೂ, ದುರಂತ ಸಂಭವಿಸಿರುವ ಪ್ರದೇಶ ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ಕೂಗಳತೆ ದೂರದಲ್ಲಿ ವರುಣಾ ನಾಲೆ ಮತ್ತು ಆರ್`ಬಿಐ ನೋಟು ಮುದ್ರಣ ಕೇಂದ್ರವಿದೆ.
ಈ ಮಧ್ಯೆ, ಬೆಂಕಿಯ ಕೆನ್ನಾಲಿಗಗೆ ಸಿಲುಕಿ ಮೃತಪಟ್ಟ ಬಾಲಕನ ಪಾರ್ಥಿವ ಶರೀರರವನ್ನ ಕೆ.ಆರ್. ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವಗ್ರಾಮಕ್ಕೆ ತರಲಾಗಿದೆ.