ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧದಲ್ಲಿ ಹೇಗೋ ಒಂದು ಜೋಡಿ ಇಲಿ ಒಳ ಸೇರಿಕೊಂಡುಬಿಟ್ಟಿವೆ. ಆ ಜೋಡಿ ಇಲಿ ಅಲ್ಲಿ ತನ್ನದಾದ ಒಂದು ಪುಟ್ಟ ಸಂಸಾರವನ್ನು ಸಹ ಮಾಡಿಕೊಂಡಿ ಬಿಟ್ಟಿದೆ. ಅವುಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿದ ಸರಕಾರ, ಶಕ್ತಿಸೌಧದಿಂದಲೇ ಓಡಿಸಲೆಂದು ಸರಿಸುಮಾರು 14 ಲಕ್ಷ ರು.ವೆಚ್ಚ ಮಾಡಿದೆ. ಆದರೂ ಇಲಿಗಳನ್ನು ಅಲ್ಲಿಂದ ಓಡಿಸಲು ಆಗಿಲ್ಲ ಎನ್ನುವುದು ಸೋಜಿಗ!
ಇಲಿ ಹಿಡಿಯೋಕೆ ಇಷ್ಟೆಲ್ಲಾ ಖರ್ಚ್ ಮಾಡ್ತಾರಾ ಎಂದು ನೀವು ಹುಬ್ಬೇರಿಸಬಹುದು. ಹೌದು ಕಣ್ರೀ... ಆ ಇಲಿ ಹೊಕ್ಕಿರುವುದು ಯಾವುದೋ ಒಂದು ಸಣ್ಣ-ಪುಟ್ಟ ಬಿಡಾರದಲ್ಲಲ್ಲ. ರಾಜ್ಯದ ಆಡಳಿತ ಕೇಂದ್ರವಾದ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ. ಮೂರು ವರ್ಷಗಳಿಂದ ರಾಜ್ಯ ಸರಕಾರ ಆ ಇಲಿಗಳನ್ನು ಓಡಿಸಲೆಂದು 14 ಲಕ್ಷ ರು. ವೆಚ್ಚಮಾಡಿದೆ. 2013/14 ರಲ್ಲಿ 3.49 ಲಕ್ಷ ರು., 2014/15 ರಲ್ಲಿ 4.96 ಲಕ್ಷ ಖರ್ಚ್ ಮಾಡಿದ್ದರೆ, 2015/16ನೇ ಸಾಲಿನಲ್ಲಿ 4.96 ಲಕ್ಷ ರು. ಖರ್ಚ್ ಮಾಡಿದೆ. ಈ ಮಾಹಿತಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲೀಪಾಟೀಲ್ ಎಂಬವರು ಆರ್.ಟಿ.ಐ ಅಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಇಲಿಗಳು ಬೀಡು ಬಿಟ್ಟಿವೆ ಎನ್ನುವುದು ಅಲ್ಲಿಯ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದ್ದವು. ಅತ್ಯಮೂಲ್ಯ ಕಾಗದ ಪತ್ರಗಳನ್ನು ಎಲ್ಲಿಯಾದರೂ ತಿಂದು ಬಿಟ್ಟರೆ ಎನ್ನುವ ಮುಂಜಾಗೃತೆಯಿಂದ, ಗಂಗಾ ಫೆಸಿಲಿಟೀಸ್ ಅಂಡ್ ಮ್ಯಾನೇಜ್ಮೆಂಟ್ ಸರ್ವಿಸಸ್ ಸಂಸ್ಥೆಗೆ ಇಲಿ ಹಿಡಿಯುವ ಜವಾಬ್ದಾರಿ ನೀಡಲಾಗಿತ್ತು. ಅಷ್ಟೊಂದು ಲಕ್ಷ ಲಕ್ಷ ಹಣ ವೆಚ್ಚ ಮಾಡಿದ್ದರೂ, ಇಲಿ ಮಾತ್ರ ಅಲ್ಲಿಂದ ಓಡಿ ಹೋಗಿಲ್ಲ. ಕೆಲವು ತಿಂಗಳ ಹಿಂದೆ ವಿಧಾನಸೌಧದ ಸಭಾಂಗಣದಲ್ಲಿ ಇಲಿಯೊಂದು ಸತ್ತು ಬಿದ್ದಿತ್ತು. ವಿಶೇಷ ಅಂದ್ರೆ, ಮೂರು ವರ್ಷದಿಂದ ಇಲಿ ಓಡಿಸಲಾಗದಿದ್ದರೂ ಅದೇ ಕಂಪನಿಗೆ ಮತ್ತೆ ಮತ್ತೆ ಟೆಂಡರ್ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.