ಅಧಿಕಾರದ ಕಾರಿಡಾರುಗಳಿಂದ ದೂರವಿರುವವರನ್ನೂ ಅರಸಿ ಹೋಗಿದೆ ಸನ್ಮಾನ.
ಪದ್ಮ ಪ್ರಶಸ್ತಿಗಳು ಮೋದಿ ಸರ್ಕಾರಕ್ಕೆ ಬಂದ ಮೇಲೆ ಬೇರೆಯದೇ ಎತ್ತರ ಏರಿ ಜನಪ್ರಿಯವಾಗಿದೆ. ಏಕೆಂದರೆ ಈ ಪ್ರಶಸ್ತಿಗಳು ಪ್ರಸಿದ್ಧಿ ಪಡೆದಿರುವ ರಾಜಕಾರಣಿ, ಪತ್ರಕರ್ತ, ವೈದ್ಯ ಇಂತವರನ್ನು ಹುಡುಕಿ ಹೋಗಿದ್ದಕ್ಕಿಂತ ಹೆಚ್ಚಾಗಿ, ಯಾರೋ ಹೆಸರು ಕೇಳಿರದ ಮೂಲೆ ಹಳ್ಳಿಗಳಲ್ಲಿ ಎಲೆ ಮರೆಯಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿರುವವರನ್ನು ಹುಡುಕಿ ಹೋಗಿದೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದಲ್ಲಿಯೂ ಪದ್ಮ ಪ್ರಶಸ್ತಿಗಳ ಸಣ್ಣ ನೆರಳು ಕಾಣಿಸುತ್ತಿದೆ. ಇದೇ ಟ್ರೆಂಡ್ ವರ್ಷವರ್ಷವೂ ಮುಂದುವರೆದರೆ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಸ ಮೆರಗು ಬಂದೀತು.
ಏಕೆಂದರೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಗರಿ ಪಡೆದವರಲ್ಲಿ ಎಷ್ಟೋ ಜನರಿಗೆ ಬಹುಶಃ ಇಂತಹದೊಂದು ಪ್ರಶಸ್ತಿ ಇದೆ ಎಂಬುದು ಕೂಡ ಗೊತ್ತಿರಲಿಕ್ಕಿಲ್ಲ. ಯಾವುದೋ ಹಳ್ಳಿ ಮೂಲೆಯಲ್ಲಿ “ತಾವಾಯಿತು ತಮ್ಮ ಸಮಾಜ ಸೇವೆ, ಪರಿಸರ ಕಾಳಜಿಯಾಯಿತು” ಎಂದು ಮಾಧ್ಯಮಗಳು, ಅಧಿಕಾರಿವಲಯದಿಂದ ದೂರವಿದ್ದರು. ಇಂತಹ ಬಹಳಷ್ಟು ಜನರನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಅರಸಿಹೋಗಿದೆ. ಹೀಗಾಗಿ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಹೊಸ ಅಲೆಗೆ ನಾಂದಿಯಾಗಿದೆ ಎನ್ನಬಹುದು. ಉದಾಹರಣೆಗೆ....
ಉತ್ತರ ಕನ್ನಡದ ಮಹಾದೇವ ಬುದೋ ವೆಳಿಪ್ ಚಿಕ್ಕ ವಯಸ್ಸಿನಿಂದಲೇ ಅರಣ್ಯ ಪ್ರದೇಶದ ಗಿಡ, ಮರ, ಬಳ್ಳಿ, ಪ್ರಾಣಿ ಪಕ್ಷಿಗಳ ಪ್ರಭೇದ ಸಂರಕ್ಷಣೆಗೆ ಮಹತ್ವ ನೀಡಿ ಜಾನಪದ ಹಾಡುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಪರಿಸರ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿ ಹುಡುಕಿ ಬಂದಿದೆ.
ಮುನಿಯಪ್ಪ ದೊಮ್ಮಲೂರು ಬೆಂಗಳೂರಿನಲ್ಲಿ ದಿಕ್ಕಿಲ್ಲದ ಸಾವಿರಾರು ಶವಗಳ ಅಂತ್ಯಕ್ರಿಯೆ ನೆರವೇರಿಸಿದ ಪುಣ್ಯ ಜೀವಿ. ಕಾಯಕವೇ ಕೈಲಾಸವೆಂಬ ನುಡಿಗೆ ಅನ್ವರ್ಥವಾಗಿ ಬದುಕುತ್ತಿರುವ ಇವರನ್ನು ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ಅಥಣಿಯ ಬಸವಪ್ರಭು ಲಕಮಗೌಡ ಪಾಟೀಲ ವಿಮೋಚನಾ ಸಂಸ್ಥೆ ಮೂಲಕ ಸಾವಿರಾರು ದೇವದಾಸಿ ಮುಗ್ಧ ಹೆಣ್ಣುಮಕ್ಕಳಿಗೆ ವಿಮೋಚನೆ ಹಾಗೂ ಪುನರ್ವಸತಿ ಒದಗಿಸಿಕೊಟ್ಟಿದ್ದಾರೆ. ಎಲೆಮರೆಯ ಕಾಯಿಯಂತಿದ್ದ ಇವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಬಾಗಲಕೋಟೆಯ ಸೂಲಗಿತ್ತಿ ಯಮುನವ್ವ ಫಲಾಪೇಕ್ಷೆಯಿಲ್ಲದೇ ಹೆರಿಗೆ ಮಾಡಿಸಿ, ಕಡುಬಡವರ ಪಾಲಿಗೆ ನೆರವಾಗಿದ್ದು, ಈವರೆಗೆ ಸುಮಾರು 3 ಸಾವಿರ ಹೆರಿಗೆ ಮಾಡಿಸಿದ್ದಾರೆ. ನಾಟಿ ಔಷಧಗಳನ್ನು ಬಳಸಿ ಸೂಲಗಿತ್ತಿ ಕೆಲಸ ಮುಂದುವರೆಸುವ ಮೂಲಕ ಜನಪದ ವೈದ್ಯ ವೃತ್ತಿಯನ್ನು ಜೀವಂತವಿಟ್ಟಿದ್ದಾರೆ.
ದಾವಣಗೆರೆಯ ಸುಲ್ತಾನಬೀ ಜಗಳೂರು ನಾಟಿ ಔಷಧ ಕೊಡುವಲ್ಲಿ ಹೆಸರುವಾಸಿ. ಚರ್ಮ ರೋಗ, ಹುಳು ಕಡ್ಡಿ ಮತ್ತು ಇಸುಬಿಗೆ ತಾನೇ ಔಷಧ ತಯಾರಿಸಿ ಕೊಡುತ್ತಾರೆ. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಈ ನಾಟಿ ವೈದ್ಯೆಗೂ ದೊರತಿದೆ.
ಬಾಗಲಕೋಟೆಯ ಸಿದ್ದಣ್ಣ ಸಾಬಣ್ಣ ಬಿದರಿ ಅನಕ್ಷರಸ್ಥ ಆಶುಕವಿ. ಇವರು ಸಾವಿರಾರು ಕವಿತೆಗಳು, 32ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯಕ್ಕೆ ಬಳುವಳಿಯಾಗಿ ನೀಡಿದ ಸಾಹಿತ್ಯ ಕಣಜ. ಇವರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನಗಿದ್ದಾರೆ.
ಗುರುಲಿಂಗಪ್ಪ ಮೇಲ್ದೊಡ್ಡಿ ಕಳೆದ 21 ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದು, ಬೆಳೆಗಳನ್ನು ಸಂಸ್ಕರಿಸಿ ಬಳಕೆದಾರರಿಗೆ ಪೂರೈಸುತ್ತಿದ್ದಾರೆ. ತಮ್ಮ ಕೃಷಿ ಅನುಭವವನ್ನು ಯುವ ರೈತರಿಗೆ ತಿಳಿಸಿಕೊಡುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಡಾ. ಅಂಬಣ್ಣ ಕಳೆದ 50 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿದ್ದು, ಈವರೆಗೆ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳನ್ನು ಗುಣಪಡಿಸಿದ ಧನ್ವಂತರಿ. ಸಮಾಜಕ್ಕೊಂದು ಆಶಾವಾದ ನೀಡಿದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮುಡಿಗೇರಿದೆ.
ಶಿವಮೊಗ್ಗದ 'ಗೌರಮ್ಮ ಹುಚ್ಚಪ್ಪ ಮಾಸ್ತರ' ಮಲೆನಾಡಿನ ದೀವರ ಸಮುದಾಯದ ಹಸೆ ಗೋಡೆ ಚಿತ್ತಾರ, ಭತ್ತದ ತೆನೆಯ ಬಾಗಿಲು ತೋರಣ, ಬುಟ್ಟಿ ಚಿತ್ತಾರವನ್ನು ಮೈಗೂಡಿಸಿಕೊಂಡಿದ್ದಾರೆ. ಗ್ರಾಮೀಣ ಮಹಿಳೆಯರಲ್ಲಿ ಹಸಿ ಚಿತ್ತಾರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇವರ ಕಲೆಗೆ ಬಾರಿ ರಾಜ್ಯೋತ್ಸವ ಪ್ರಶಸ್ತಿ ಹೊಳಪು ನೀಡಿದೆ.
ಮೈಸೂರು ಜಿಲ್ಲೆಯ 'ಮದಲಿ ಮಾದಯ್ಯ' ಪಾರಂಪರಿಕವಾಗಿ ಬಂದ ಕಲೆ, ಭಾಷೆ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇವರು ಬೆಟ್ಟಕುರುಬ ಸಮುದಾಯದ ಸಂಪ್ರದಾಯದಂತೆ ಜೀವನ ನಡೆಸುತ್ತಿದ್ದಾರೆ.
'ಡಾ. ಶಿವಗೌಡ ರುದ್ರಗೌಡ ರಾಮನಗಗೌಡರ್' ಉತ್ತರ ಕರ್ನಾಟಕ ಭಾಗದ ಹಳ್ಳಿಯ ಜನರ ಆರೋಗ್ಯ ಸೇವೆಗಾಗಿ ಆಸ್ಪತ್ರೆ ನಿರ್ಮಿಸಿ, ಸತತ 40 ವರ್ಷದಿಂದ ಲಕ್ಷಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಿ ಬಡವರ ಪಾಲಿನ ದೇವರಾಗಿದ್ದಾರೆ.
'ಡಾ. ವೇದವ್ಯಾಸ ದೇಶಪಾಂಡೆ' ಕಳೆದ 35 ವರ್ಷಗಳಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಸುತ್ತಮುತ್ತಲಿನ ಸಮುದಾಯಕ್ಕೆ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಫಲಾಪೇಕ್ಷೆಗಳಿಲ್ಲದ ಇವರ ವೃತ್ತಿ ಬದುಕಿಗೆ 2021ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಸಿಕ್ಕಿದೆ.