ಇಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದಿಂದ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿ ಪಕ್ಷದಿಂದ ಏಕೈಕ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಡಾ.ಎಲ್.ಹನುಮಂತಯ್ಯ, ಡಾ.ಸಯೀದ್ ನಾಸೀರ್ ಹುಸೈನ್ ಮತ್ತು ಜಿ.ಸಿ.ಚಂದ್ರಶೇಖರ್ ಜಯಗಳಿಸಿದ್ದರೆ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ವಿಜಯ ಪತಾಕೆ ಹಾರಿಸಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದ ಬಿ.ಎಂ.ಫಾರೂಕ್ ಸೋಲನುಭವಿಸಿ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಮರಳಿದ್ದಾರೆ.
ಒಟ್ಟು 188 ಮತಗಳು ಚಲಾವಣೆಯಾಗಿದ್ದು ನಾಲ್ಕು ಮತಗಳು ತಿರಸ್ಕ್ರತಗೊಂಡಿವೆ. ಕಾಂಗ್ರೆಸ್ ಪಕ್ಷದ ಡಾ.ಎಲ್.ಹನುಮಂತಯ್ಯ 44 ಮತಗಳನ್ನು ಪಡೆದು ಜಯಶಾಲಿಯಾಗಿದ್ದರೆ, 42 ಮತಗಳನ್ನು ಪಡೆದು ನಾಸೀರ್ ಹುಸೈನ್ ಜಯಗಳಿಸಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಜೆ.ಸಿ.ಚಂದ್ರಶೇಖರ್ 46 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಯಾಗಿದ್ದ ರಾಜೀವ್ ಚಂದ್ರಶೇಖರ್ 50 ಮತಗಳನ್ನು ಪಡೆದು ನಿರೀಕ್ಷೆಯಂತೆ ಗೆಲುವು ದಾಖಲಿಸಿ ರಾಜ್ಯಸಬೆಯನ್ನು ಪ್ರವೇಶಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಫಾರೂಕ್ ಸೋಲನುಭವಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ನಾಯಕರು ಗರಂ
ವಿಧಾನಸೌಧದಲ್ಲಿ ನಡೆಯುತ್ತಿರುವ ರಾಜ್ಯ ಸಭೆ ಮತದಾನದ ಸಂದರ್ಭ ಚುನಾವಣಾಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕರು ಗದ್ದಲವೆಬ್ಬಿಸಿದ್ದಾರೆ.
ಕಾಂಗ್ರೆಸ್ ಶಾಸಕರಾದ ಕಾಗೋಡು ತಿಮ್ಮಪ್ಪ ಮತ್ತು ಬಾಬೂರಾವ್ ಚಿಂಚನಸೂರ್ ಅವರಿಗೆ ಎರಡು ಮತ ಪತ್ರ ನೀಡಿದ್ದಕ್ಕೆ ಸಿಟ್ಟಿಗೆದ್ದ ಜೆಡಿಎಸ್ ಸದಸ್ಯರು ಗದ್ದಲವೆಬ್ಬಿಸಿದ್ದು, ಎಚ್ ಡಿ ರೇವಣ್ಣ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಬಳಿಕ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಖ್ ಮುಖ್ಯ ಚುನಾವಣಾಧಿಕಾರಿಗಳಿಗೆ, ಸ್ಥಳದಲ್ಲಿದ್ದ ಚುನಾವಣಾಧಿಕಾರಿ ಎಸ್ ಮೂರ್ತಿ ವಿರುದ್ಧ ದೂರು ಸಲ್ಲಿಸಿದರು. ಈ ಗದ್ದಲದಿಂದಾಗಿ ಕೆಲ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.