ಮಂಡ್ಯ: ಜೆಡಿಎಸ್ ಜತೆಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳದಿರಲು ಸಿಎಂ ಸಿದ್ದರಾಮಯ್ಯ ನಿಶ್ಚಯಿಸಿದಂತಿದೆ. ಅದೇ ಕಾರಣಕ್ಕೆ ಮಂಡ್ಯದ ಮೇಲುಕೋಟೆಯಲ್ಲಿ ದರ್ಶನ್ ಸ್ಪರ್ಧೆಗೆ ಬೆಂಬಲಿಸಿದ್ದಾರೆ.
ಇದೀಗ ಇದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮೇಲುಕೋಟೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸೋಲುಣಿಸಲು ರೈತ ನಾಯಕ ಕೆಎಸ್ ಪುಟ್ಟಣ್ಣಯ್ಯ ಪುತ್ರ ದರ್ಶನ್ ಸ್ಪರ್ಧೆಗಿಳಿದರೆ ತಮ್ಮ ಪಕ್ಷದಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿಸದೇ ಇರಲು ಸಿಎಂ ಮೊದಲೇ ಲೆಕ್ಕಾಚಾರ ಹಾಕಿದ್ದರು.
ಇದೀಗ ರಾಹುಲ್ ಗಾಂಧಿ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಾಗ ದರ್ಶನ್ ಭೇಟಿ ಮಾಡಿದ್ದು, ಯುವ ನಾಯಕನ ಬೆನ್ನು ತಟ್ಟಿ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ರೈತರ ಸಮಸ್ಯೆಗಳ ಬಗ್ಗೆ ವಿವರವಾದ ಪತ್ರವೊಂದನ್ನು ದರ್ಶನ್ ಪುಟ್ಟಣ್ಣಯ್ಯ ರಾಹುಲ್ ಗಾಂಧಿಗೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸ್ವತಃ ಮುಂದೆ ನಿಂತು ದರ್ಶನ್ ಪರಿಚಯ ಮಾಡಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಡಾ ದರ್ಶನ್ ಕೈ ಕುಲುಕಿ ಉಭಯ ಕುಶಲೋಪರಿ ನಡೆಸಿದ್ದಾರೆ. ಈ ಮೂಲಕ ಮೇಲುಕೋಟೆಯಲ್ಲಿ ದರ್ಶನ್ ಎದುರಿಗೆ ತಮ್ಮ ಪಕ್ಷದ ಅಭ್ಯರ್ಥಿ ಹಾಕದೇ ಇರುವ ಸಿಎಂ ತೀರ್ಮಾನಕ್ಕೆ ಸೈ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ