ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು 13 ತಿಂಗಳಾಗಿದೆ. ಒಂದಾದಮೇಲೆ ಒಂದರಂತೆ ಬ್ರಹ್ಮಾಂಡ ಭ್ರಷ್ಟಾಚಾರಗಳು, ಲೂಟಿ ಮಾಡಲು ಹೆಬ್ಬಾಗಿಲು ತೆಗೆದು, ಲೂಟಿಗಾಗಿ ಸುರಂಗ ಕೊರೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆರೋಪಿಸಿದರು.
ನಗರದಲ್ಲಿ ಇಂದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಮೈಸೂರಿನ ಮೂಡಾ ಅವ್ಯವಹಾರವನ್ನು ಖಂಡಿಸಿ ಇಂದು ಸಿಎಂ ಮನೆಗೆ ಮುತ್ತಿಗೆ ಹಾಕಲೆಂದು ಕುಮಾರಕೃಪಾ ವಸತಿಗೃಹದಿಂದ ಹೊರಟ ವೇಳೆ ಬಿಜೆಪಿ ಜನಪ್ರತಿನಿಧಿಗಳನ್ನು ಬಂಧಿಸಲಾಯಿತು. ಇದೇ ಸಂದರ್ಭದಲ್ಲಿ ಅಶೋಕ್ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಮೊನ್ನೆ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಪಟಾಪಟ್ ಎಂದು ರಾಹುಲ್ ಗಾಂಧಿಯವರು ಹೇಳಿದ ಮಾದರಿಯಲ್ಲಿ ಬೇನಾಮಿ ಖಾತೆಗಳು, ಬಾರ್‍ಗಳು, ವೈನ್ ಸ್ಟೋರ್‍ಗಳಿಗೆ ವರ್ಗಾಯಿಸಿದರು. ಲ್ಯಾಂಬೊರ್ಗಿನಿ, ಒಡವೆ- ಏನೇನು ಬೇಕೋ ಅವೆಲ್ಲವನ್ನೂ ಖರೀದಿಸಿದರು. ದಲಿತರ ಹಣ ಚಿನ್ನದ ಅಂಗಡಿಗೆ, ಕಾರು ಖರೀದಿಗೆ, ಬಾರ್‍ಗಳಿಗೆ, ಕಾಂಗ್ರೆಸ್ ಪಕ್ಷಕ್ಕೆ ಹೋಗಿದೆ ಎಂದು ಟೀಕಿಸಿದರು.
ನಮ್ಮ ಹೋರಾಟದ ಪರಿಣಾಮವಾಗಿ, ರಾಜಭವನದ ಬಾಗಿಲಿಗೆ ಹೋದ ಬಳಿಕ ನಾಗೇಂದ್ರ ಅವರು ರಾಜೀನಾಮೆ ಕೊಟ್ಟರು ಎಂದು ತಿಳಿಸಿದರು.