ಬೆಂಗಳೂರು: ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ ಎಂಬ ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್ ಜಾತಿಗಣತಿ ಬಗ್ಗೆ ಹಲವು ಪ್ರಶ್ನೆಗಳನ್ನು ಸಿಎಂ ಸಿದ್ದರಾಮಯ್ಯ ಮುಂದಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದರು.
ಆರ್ ಅಶೋಕ್ ಪೋಸ್ಟ್ ಹೀಗಿದೆ: ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು ಇಲ್ಲ ಅಥವಾ ವಿರೋಧವೂ ಇಲ್ಲ. ಬಿಜೆಪಿಯ ಮೂಲಸಿದ್ಧಾಂತವಾದ 'ಅಂತ್ಯೋದಯ'ದ ಪರಿಕಾಲ್ಪನೆಯಲ್ಲೇ ತಳ ಸಮುದಾಯಗಳನ್ನ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಸಾಮಾಜಿಕ ನ್ಯಾಯದ ಬದ್ಧತೆ ಅಡಗಿದೆ. ಅದನ್ನ ಸಾಕಾರಗೊಳಿಸುವ ಯಾವ ಕ್ರಮಕ್ಕಾದರೂ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ.
ಆದರೆ ರಾಜಕೀಯ ಚದುರಂಗದಾಟದಲ್ಲಿ ಜಾತಿ ಜನಗಣತಿಯನ್ನು ದಾಳವಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ವಿರೋಧವಿದೆ. ರಾಜಕೀಯ ಹಾವು-ಏಣಿ ಆಟದಲ್ಲಿ ಕೆಳಗೆ ಬಿದ್ದಾಗ ಮೇಲೇಳಲು, ಕುರ್ಚಿ ಉಳಿಸಿಕೊಳ್ಳಲು ಜಾತಿಗಣತಿಯನ್ನ ಏಣಿಯಾಗಿ ಬಳಸಿಕೊಳ್ಳುವುದಕ್ಕೆ ನಮ್ಮ ತಕರಾರಿದೆ ಎಂದು ಬರೆದುಕೊಂಡಿದ್ದರು.
ಈ ಸಂಬಂದ ಇದೀಗ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿ ಕೌಂಟರ್ ಕೊಟ್ಟಿದ್ದಾರೆ.
'ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ' ಎಂಬ ವಿರೋಧಪಕ್ಷದ ನಾಯಕರಾದ ಆರ್ ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು.
ಅಶೋಕ್ ಅವರೇ, ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ 'ಅಂತ್ಯೋದಯ' ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ<>