ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಕೊನೆಯ ಆಸೆಯಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಹಿಂಭಾಗದಲ್ಲಿರುವ ಖಲಂದರ್ ಖಾನ್ ಕಬರಿಸ್ಥಾನನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಖಮರುಲ್ ಇಸ್ಲಾಂ ಅವರ ತಂದೆ, ತಾಯಿ, ಅಣ್ಣ ಸೇರಿದಂತೆ ಕುಟುಂಬದ ಮೃತ ಸದಸ್ಯರ ದಫನ್ ಇದೆ ಖಲಂದರ್ ಖಾನ್ ಕಬರಿಸ್ಥಾನದಲ್ಲಿ ನಡೆದಿದೆ. ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಖಮರುಲ್ ಇಸ್ಲಾಂ, ತಮ್ಮ ಸಾವಿನ ನಂತರ ದಫನ್ ಇಲ್ಲಿಯೇ ಮಾಡುವಂತೆ ಹೇಳಿದ್ದರಂತೆ. ಅವರ ಆಸೆಯಂತೆಯೇ ಇದೇ ಕಬರಿಸ್ಥಾನದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಖಮರುಲ್ ಇಸ್ಲಾಂ ಅವರ ತಾಯಿ ಮತ್ತು ಸಹೋದರನ ಸಮಾಧಿ ಪಕ್ಕದಲ್ಲಿ ಇಸ್ಲಾಂ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೆರಿಸಲಾಗುವುದು. ಇದಕ್ಕೂ ಮೊದಲು ಹಾಗರಗಾ ರಿಂಗ್ ರಸ್ತೆಯಲ್ಲಿರುವ ಕೆಸಿಟಿ ಮೈದಾನದಲ್ಲಿ ಅಂತಿಮ ದರ್ಶನ ಮತ್ತು ನಮಾಜ್ ಎ ಜಮಾಜ್ (ನಮಾಜ್)ಗೆ ವ್ಯವಸ್ಥೆ ಕಲ್ಪಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಇನ್ನು ಮಾಜಿ ಸಚಿವ ಡಾ.ಖಮರುಲ್ ಇಸ್ಲಾಂ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ನಾಳೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.