ಕೋವಿಡ್-19 ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡುವ ಸಂದರ್ಭದಲ್ಲಿ ಶಾಲೆಯನ್ನು ಸ್ಥಳಾವಕಾಶಕ್ಕಾಗಿ ನೀಡದ ಸರಕಾರಿ ಶಾಲೆ ಮುಖ್ಯ ಶಿಕ್ಷಕನನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ.
ಕರ್ತವ್ಯ ಲೋಪವೆಸಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ದೇವರನಾವದಗಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಅಶೋಕ ರಡ್ಡೇರ ಅವರನ್ನು ಸಿಸಿಎ ನಿಯಮ 1957 (ವರ್ಗೀಕರಣ ಹಾಗೂ ಮೇಲ್ಮನವಿ) ನಿಯಮ 10(1)ಡಿ ರನ್ವಯ ಇಲಾಖೆಯ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ) ಸಿ.ಪ್ರಸನ್ನಕುಮಾರ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಮುಖ್ಯ ಶಿಕ್ಷಕ ಅಶೋಕ ರಡ್ಡೇರ ಅವರು ಕ.ಸ.ಸೇ.ನಿ.98ರ ಪ್ರಕಾರ ಜೀವನಾಂಶ ಭತ್ತೆ ಪಡೆಯಲು ಅರ್ಹರಿರುತ್ತಾರೆ. ಸದರಿ ಅವರು ಅಮಾನತ್ತು ಅವಧಿಯಲ್ಲಿ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ.
ಮೇ 13 ರಂದು ಜಿಲ್ಲಾಧಿಕಾರಿಗಳ ಸೂಚನೆ ಮತ್ತು ಮೇ 14ರಂದು ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರಿನನ್ವಯ ಈ ಶಿಕ್ಷಕರನ್ನು ಅಮಾನತ್ತುಗೊಳಿಸಲಾಗಿದೆ ಎಂದು ಅವರ ಆದೇಶದಲ್ಲಿ ತಿಳಿಸಲಾಗಿದೆ.