ಕುಟುಂಬ ಸಹಿತವಾಗಿ ರೈತರು ಠಿಕಾಣಿ ಹೂಡಿರೋ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದ ರೈತ ಸಂಪರ್ಕ ಕೇಂದ್ರದ ಬಳಿ ಶೇಂಗಾ ಬೀಜಕ್ಕಾಗಿ ರೈತರ ಪರದಾಟ ಶುರುವಾಗಿದೆ.
ರಾತ್ರಿಯಿಂದ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಹಾಗೂ ಮಹಿಳೆಯರು ಊಟ, ನಿದ್ರೆ ಇಲ್ಲದೇ ಶೇಂಗಾ ಬೀಜಕ್ಕಾಗಿ ಕಾಯುತ್ತಿದ್ದಾರೆ.
ರೈತ ಸಂಪರ್ಕ ಕೇಂದ್ರದ ಮುಂದೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶೇಂಗಾ ಬೀಜ ಸಮರ್ಪಕವಾಗಿ ಸಿಗದ ಕಾರಣ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರದ ಮುಂದೆ ಕುಟುಂಬ ಸಮೇತ ಆಗಮಿಸಿ ಠಿಕಾಣಿ ಹೂಡಿದ್ದಾರೆ.
ಸಬ್ಸಿಡಿ ದರದಲ್ಲಿ ಹಿಂಗಾರು ಹಂಗಾಮಿನಲ್ಲಿ ಶೇಂಗಾ ಬೀಜ ವಿತರಣೆ ಮಾಡಬೇಕಾದ ಕೃಷಿ ಇಲಾಖೆ, ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೀಜ ಪೂರೈಕೆ ಮಾಡುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ಸರಬರಾಜು ಮಾಡಿದ ಕಾರಣ ರೈತರ ಪರದಾಟ ತೀವ್ರಗೊಂಡಿದೆ.
ಗುರುಮಠಕಲ್ ಹಾಗೂ ಯಾದಗಿರಿ ರೈತ ಸಂಪರ್ಕ ಕೇಂದ್ರಗಳ ಮುಂದೆ ಅನ್ನದಾತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.