ಬೆಂಗಳೂರು: ಶಾಸಕ ಚಿಕ್ಕಮಾದು ಅವರ ನಿಧನದಿಂದ ಮುಂದೂಡಿರುವ ಸಮಾವೇಶ ನವೆಂಬರ್ 7 ರಂದು ನಡೆಸುತ್ತೇವೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಜೆಪಿನಗರ ನಿವಾಸದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಸಮಾವೇಶ ಆರಂಭಿಸುತ್ತೇವೆ. ನ. 8 ರಂದು ತರಿಕೇರೆಯಲ್ಲಿ ಹಾಗೂ ಅದೇ ದಿನ ಸಾಯಂಕಾಲ 4 ಗಂಟೆಗೆ ಶಿವಮೊಗ್ಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ನ. 8 ರಂದು ಗ್ರಾಮವಾಸ್ತವ್ಯ ಹೂಡಲಿದ್ದು, ನ. 9 ರಂದು ಚನ್ನಗಿರಿಯಲ್ಲಿ, ಸಂಜೆ 4 ಗಂಟೆಗೆ ಹರಿಹರದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದು ಮೊದಲ ಹಂತದ ಪ್ರವಾಸ ಎಂದರು.
ಬೆಳಗಾವಿಯಲ್ಲಿ ಅಧಿವೇಶನದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ರಾಯಚೂರು ಭಾಗದಿಂದ ಬೈಕ್ ರ್ಯಾಲಿ ನ.7 ರಂದು ಆರಂಭವಾಗಲಿದೆ. ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ನೇತೃತ್ವದಲ್ಲಿ ರಾಯಚೂರು-ಬಾಗಲಕೋಟೆ- ವಿಜಯಪುರ - ಬೆಳಗಾವಿಗೆ ಬೈಕ್ ರ್ಯಾಲಿ ತೆರಳಲಿದೆ. ನ. 13 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ನ. 23ರ ಬಳಿಕ ಉತ್ತರ ಕರ್ನಾಟಕ ಪ್ರವಾಸ ಮತ್ತು ಗ್ರಾಮವಾಸ್ತವ್ಯ ಹೂಡಲಿದ್ದೇವೆ. ಅಧಿವೇಶನ ಹಾಗೂ ರಾಜ್ಯ ಪ್ರವಾಸದ ಬಗ್ಗೆ ಚರ್ಚೆ ನಡೆಸಲು ನಾಳೆ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದರು.
ಇನ್ನು ಖಾಸಗಿ ವೈದ್ಯರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರಕ್ಕೆ ಬುದ್ದಿ ಹೇಳ್ತೇನೆ. ಇಂಥಹ ಹುಚ್ಚು ತೀರ್ಮಾನ ಮಾಡಬೇಡಿ. ರಾಜ್ಯದಲ್ಲಿ ಒಬ್ಬರು ಬೃಹಸ್ಪತಿ ಇದ್ದಾರೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರೊಬ್ಬರೇ ಬುದ್ಧಿವಂತರು ಬೇರೆ ಯಾರು ಇಲ್ಲ. ಅವರೊಬ್ಬರೇ ಪ್ರಾಮಾಣಿಕರು ಬೇರೆ ಯಾರು ಇಲ್ಲ. ಅವರ ಪದ ಬಳಕೆ ಸರಿಯಿಲ್ಲ. ವೈದ್ಯರು ಇವರ ಮನೆಯ ಚಪರಾಸಿಗಳ, ಗುಲಾಮರ ಎಂದರು.