ಸತ್ತವರ ಹೆಸರಲ್ಲೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ಹಣ ಗುಳುಂ ಮಾಡಿರುವ ಆರೋಪ ಕೇಳಿಬಂದಿದೆ.
ಗದಗ ಸಮೀಪದ ನಾಗಾವಿ ತಾಂಡಾದಲ್ಲಿ ಪಿಡಿಒ ಬಚ್ಚೆನಹಳ್ಳಿ ಮತ್ತು ಗ್ರಾಪಂ ಅಧ್ಯಕ್ಷ ಸುರೇಶ ಚವ್ಹಾಣ ಸೇರಿ ಸಾರ್ವಜನಿಕರ ಹಣ ಗುಳುಂ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಸತ್ತವರ ಹೆಸರಲ್ಲೂ ಬಿಲ್ ಪಾಸ್ ಮಾಡ್ಕೊಂಡು ಹಣ ಲಪಟಾಯಿಸಿರುವ ಅಂಶ ಬೆಳಕಿಗೆ ಬಂದಿದೆ.
ಸುಮಾರು 15 ಕ್ಕೂ ಹೆಚ್ಚು ಜನರ ಹೆಸರಲ್ಲಿ ನಕಲಿ ಜಿಪಿಎಸ್ ಮಾಡಿಸಿ ಜೇಬಿಗೆ ಹಣ ಇಳಿಸಿದ್ದಾರೆಂಬ ಆರೋಪವನ್ನು ಸ್ವತಃ ಹಣ ಕಳೆದುಕೊಂಡವರೇ ಮಾಡಿದ್ದಾರೆ. ಜತೆಗೆ ಮಾಜಿ ಗ್ರಾಪಂ ಅಧ್ಯಕ್ಷ ಸಾರಾಬಾಯಿ ಚವ್ವಾಣ ಕೂಡ ಈ ಗೋಲ್ ಮಾಲ್ ನಲ್ಲಿ ಕೈ ಜೋಡಿಸಿದ್ದಾರೆಂಬ ಸಂಗತಿ ದಾಖಲಾತಿ ಮೂಲಕ ಬಹಿರಂಗಗೊಂಡಿದೆ. ಗ್ರಾಮದ ಪಾಂಡಪ್ಪ ಪೂಜಾರ ಎಂಬುವರು ನಿಧನ ಹೊಂದಿ 8 ವರ್ಷಗಳೇ ಗತಿಸಿವೆ. ಆದ್ರೆ ಅವರ ಹೆಸರಲ್ಲಿ ಪಿಎಂ ಅವಾಸ್ ಯೋಜನೆಯಲ್ಲಿ ಮನೆ ಮಂಜೂರು ಮಾಡಿ 37292 ರೂ. ಡ್ರಾ ಮಾಡಿಕೊಂಡಿದ್ದು ದಾಖಲಾತಿ ಮೂಲಕ ಬಹಿರಂಗಗೊಂಡಿದೆ. ಇನ್ನೂ ಕೇಲವ್ವ ಎಂಬ ಮಹಿಳೆ ಹೆಸರಲ್ಲಿ ಗ್ರಾಪಂ ಅಧ್ಯಕ್ಷ ಸುರೇಶ ಚವ್ವಾಣ 1,50,000 ರೂ. ಪಡೆದಿದ್ದಾನೆ ಎಂಬುದು ಗೊತ್ತಾಗಿದೆ.
ಕೇಲವ್ವ ಹೆಸರಲ್ಲಿ ಹಣ ಮಂಜೂರಾಗಿದ್ದು ಮನೆಯ ಜಿಪಿಎಸ್ ಮಾಡುವಾಗ ಅಧ್ಯಕ್ಷ ಸುರೇಶ ಮನೆ ಎದುರು ಫೋಟೋ ತೆಗೆಸಿಕೊಂಡು ಜಿಪಿಎಸ್ ಮಾಡಿಸಿಕೊಂಡಿದ್ದೆ ಸುರೇಶ ಸಿಕ್ಕಿ ಹಾಕಿಕೊಳ್ಳೋದಕ್ಕೆ ಮುಖ್ಯ ಕಾರಣವಾಗಿದೆ. ಗ್ರಾಮದ ಪೀರಪ್ಪ ಪವಾರ್, ರಮೇಶ ತೋಟದ, ಶಿವಪ್ಪ ರಾಠೋಡ, ಸೋಮಪ್ಪ ಲಮಾನಿ ನಿಂಗಪ್ಪ ಹಂದರಾಳ ಸೇರಿದಂತೆ 15ಕ್ಕೂ ಹೆಚ್ಚು ಜನರ ಹೆಸರಲ್ಲಿ ಮನೆ ಮಂಜೂರು ಮಾಡಿಕೊಂಡು ಲಕ್ಷಾಂತರ ಹಣ ಲಪಟಾಯಿಸಿದ್ದು ಬೆಳಕಿಗೆ ಬಂದಿದೆ.