ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದ ಪ್ರಧಾನಿ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುತ್ತದೆ ಎಂಬ ಗಾಳಿಸುದ್ದಿ ಬಲವಾಗಿ ಹರಿದಾಡಲಾರಂಭಿಸಿದೆ. ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಿಜವಾಗಿಯೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಗೆ ಜಾರಿಗೆ ಬರುವುದಿಲ್ಲ. ಇದೇನಿದ್ದರೂ ಮಾಧ್ಯಮಗಳ ಸೃಷ್ಠಿಯಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಕೆಲವು ಮಾಧ್ಯಮಗಳು ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳುತ್ತದೆ. ಆಗ ರಾಷ್ಟ್ರಪತಿ ಆಡಳಿತ ಜಾರಿಗೆ ಬರಲಿದೆ ಎಂದು ಈಚೆಗೆ ವರದಿ ಮಾಡುತ್ತಲೇ ಇವೆ. ನಿಜಕ್ಕೂ ಈ ವರದಿಗಳು ಸುಳ್ಳಿನಿಂದ ಕೂಡಿವೆ. ಸಮ್ಮಿಶ್ರ ಸರ್ಕಾರ ಸಧೃಢವಾಗಿದ್ದು 5 ವರ್ಷಗಳ ಕಾಲ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದರು.
ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ವರಿಷ್ಠರು ಮಾಡಿಕೊಂಡಿರುವ ಒಪ್ಪಂದದಂತೆ ನಡೆದುಕೊಳ್ಳುವುದರಿಂದ ಇಂತಹ ಗಾಳಿ ಸುದ್ದಿಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದೆಂದು ಕುಮಾರಸ್ವಾಮಿ ಹೇಳಿದ್ದಾರೆ.