ಪೊಲೀಸ್ ಮ್ಯಾನ್ಯುವಲ್ ಪ್ರಕಾರ ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ ಎಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಎಸ್‌ಸಿ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಪೊಲೀಸರು ಜೂನ್ 4 ರಂದು ಸಾಮೂಹಿಕವಾಗಿ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ಮುಂದಾಗಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಆದರೆ, ನಮ್ಮ ಪೊಲೀಸರು ಪ್ರತಿಭಟನೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ.
ಹೊರ ರಾಜ್ಯದ ಶಶಿಧರ್ ಎಂಬ ವ್ಯಕ್ತಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಆದರೆ, ಪೊಲೀಸ್ ಮ್ಯಾನ್ಯುವಲ್ ಪ್ರಕಾರ ಪೊಲೀಸರು ಪ್ರತಿಭಟನೆ ನಡೆಸುವಂತಿಲ್ಲ. ಪೊಲೀಸರ ಬೇಡಿಕೆ ಏನು ಎಂಬುದನ್ನು ತಿಳಿದುಕೊಂಡು ಚರ್ಚೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಹೊರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಆದರೂ ಸಹ ಪೊಲೀಸರ ಬೇಡಿಕೆಯ ಕುರಿತು ಚರ್ಚೆ ನಡೆಸಿ, ಹೆಚ್ಚಿನ ಸೌಲಭ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸುತ್ತೇವೆ ಎಂದು ರಾಜ್ಯ ಗೃಹ ಖಾತೆ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.