ಪತ್ರಕರ್ತ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಟೀಕೆಗಳಿಗಾಗಿ ಬಿಜೆಪಿ ಶೃಂಗೇರಿ ಶಾಸಕ ಡಿ ಎನ್ ಜೀವರಾಜ್ ವಿರುದ್ಧ ಹಲವು ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿವೆ.
ಕೊಪ್ಪ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾದ ಮಂಗಳೂರು ಚಲೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಜೀವರಾಜ್, ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಚಡ್ಡಿಗಳ ಮಾರಣಹೋಮ ಎನ್ನುವ ಶಬ್ದಗಳನ್ನು ಬಳಸದಿದ್ದಲ್ಲಿ ಜೀವಂತವಾಗಿರುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ತಾಲೂಕು ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಟಿವರಾಗಿದ್ದ ಜೀವರಾಜ್ ವಿರುದ್ಧದ ಭ್ರಷ್ಟಾಚಾರಗಳನ್ನು ಗೌರಿ ಲಂಕೇಶ್ ಬಹಿರಂಗಗೊಳಿಸಿದ್ದರು. ಆದ್ದರಿಂದ ಸೇಡು ತೀರಿಸಿಕೊಳ್ಳಲು ಶಾಸಕ ಜೀವರಾಜ್, ಗೌರಿ ಲಂಕೇಶ್ ಹತ್ಯೆ ಮಾಡಿರಬಹುದು ಎನ್ನುವ ಶಂಕೆ ನನ್ನನ್ನು ಕಾಡುತ್ತಿದೆ. ಆದ್ದರಿಂದ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ಸಲ್ಲಿಸಿದ ದೂರನ್ನುಗೌರಿ ಹತ್ಯೆಗೆ ಸಂಬಂಧಿಸಿದ ದೂರು ದಾಖಲಾಗಿರುವ ಬೆಂಗಳೂರಿನ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಕೊಪ್ಪ ಪೊಲೀಸ್ ಠಾಣೆಯ ಅಧಿಕಾರಿ ಡಿ.ಎನ್.ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.