ಬೆಂಗಳೂರು: ವಯ್ಯಾಲಿಕಾವಲ್ ನ ಮಹಾಲಕ್ಷ್ಮಿ ಮರ್ಡರ್ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೃತಳ ಮನೆಯಲ್ಲಿ ಮಹತ್ವದ ಸಾಕ್ಷಿಯೊಂದು ಸಿಕ್ಕಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ವಯ್ಯಾಲಿಕಾವಲ್ ನ ಬಾಡಿಗೆ ಮನೆಯೊಂದರಲ್ಲಿ ಮಹಾಲಕ್ಷ್ಮಿ ವಾಸವಿದ್ದಳು. ಅಲ್ಲಿಯೇ ಫ್ರಿಡ್ಜ್ ಒಳಗೆ ಪೀಸ್ ಪೀಸ್ ಆದ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಇಷ್ಟರವರೆಗೆ ಪೊಲೀಸರು ಓರ್ವನಿಂದಲೇ ಈ ಕೃತ್ಯ ನಡೆದಿದೆ ಎಂದುಕೊಂಡಿದ್ದಾರೆ. ಆದರೆ ಈಗ ಆಕೆಯ ಮನೆಯಲ್ಲಿ ಗೋಡೆ ಮತ್ತು ಫ್ರಿಡ್ಜ್ ನಲ್ಲಿ ನಾಲ್ಕೈದು ಫಿಂಗರ್ ಪ್ರಿಂಟ್ ಪತ್ತೆಯಾಗಿದೆ.
ಹೀಗಾಗಿ ಈ ಕೃತ್ಯದಲ್ಲಿ ಒಬ್ಬ ಮಾತ್ರ ಭಾಗಿಯಾಗಿರುವುದೇ ಅಥವಾ ನಾಲ್ಕೈದು ಮಂದಿಯ ಕೈವಾಡವಿದೆಯೇ ಎಂಬ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದೆ. ಹೀಗಾಗಿ ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ. ಮಹಾಲಕ್ಷ್ಮಿ ಪತಿ ಕೂಡಾ ಆಕೆಗೆ ಬೇರೆ ಇಬ್ಬರ ಜೊತೆ ಸ್ನೇಹವಿದ್ದ ವಿಚಾರ ತಿಳಿಸಿದ್ದ.
ಹೀಗಾಗಿ ವಿವಾಹೇತರ ಸಂಬಂಧದಲ್ಲಿ ಅಸಮಾಧಾನವಾಗಿದ್ದೇ ಕೊಲೆಗೆ ಕಾರಣವಿರಬಹುದೇ, ಹೀಗಾಗಿ ಒಬ್ಬರಲ್ಲ ಇಬ್ಬರು ಕೊಲೆ ನಡೆಸಿರಬಹುದೇ ಎಂಬ ಸಂಶಯ ಮೂಡಿದೆ. ಉತ್ತರ ಭಾರತಕ್ಕೆ ಹೋಗಿ ತಲೆಮರೆಸಿಕೊಂಡಿರುವ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಾನೆ. ಇದರಿಂದ ಪೊಲೀಸರಿಗೆ ಆತನನ್ನು ಹಿಡಿಯುವುದೇ ತಲೆನೋವಾಗಿದೆ.