ಬೆಂಗಳೂರು: ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದು, ಮತ್ತೊಬ್ಬನಿಗಾಗಿ ಶೋಧ ನಡೆಸಲಾಗ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಮಿಷನರ್, ಡಿಸಿಪಿ ಚೇತನ್ ರಾಥೋಡ್ ನೇತೃತ್ವದಲ್ಲಿ
5 ವಿಶೇಷ ತಂಡ ರಚನೆ ಮಾಡಲಾಗಿತ್ತು. ಶರತ್ ಸ್ನೇಹಿತರು, ಸಂಬಂಧಿಕರನ್ನು ತನಿಖೆ ನಡೆಸಲಾಗಿತ್ತು. ವಿಶಾಲ್ ಮತ್ತು ಶರತ್ ಇಬ್ಬರೂ ಸಹ ಬಾಲ್ಯ ಸ್ನೇಹಿತರು. ಶರತ್ ಕುಟುಂಬಸ್ಥರಿಗೆ ಮೊದಲಿನಿಂದಲೇ ಪರಿಚಯವಿತ್ತು. ಹೀಗಾಗಿ ಬಹಳಷ್ಟು ಆತ್ಮೀಯ ಸಂಬಂಧವಿರೋ ಕಾರಣ ಯಾರು ಸಹ ವಿಶಾಲ್ ಮೇಲೆ ಅನುಮಾನ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ.
ಶರತ್ ನನ್ನು ವಿಶಾಲ್ ಉಲ್ಲಾಳ ಆರ್ ಟಿಓ ಕಚೇರಿ ಬಳಿ ಭೇಟಿಯಾಗಿದ್ದಾನೆ. ನಂತರ ಪಾರ್ಟಿ ಮಾಡಲೆಂದು ಅಲ್ಲೇ ಹತ್ತಿರದಲ್ಲಿರುವ ವೈನ್ ಶಾಪ್ ಗೆ ಹೋಗಿ ಒಂದು ಕೇಸ್ ಬಿಯರ್ ತೆಗೆದುಕೊಂಡು ರಾಮೋಹಳ್ಳಿ ಕೆರೆ ಬಳಿ ಕರೆದುಕೊಂಡು ಹೋಗಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಆದರೆ ಶರತ್ ಅಪಹರಣ ಬಳಿಕ ದೂರು ದಾಖಲಾಗುತ್ತಿದ್ದಂತೆ ಶರತ್ ಕತ್ತಿಗೆ ಹಗ್ಗ ಹಾಕಿ ಕೊಲೆ ಮಾಡಿದ್ದಾರೆ. ನಂತರ ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿದ್ದಾರೆ. 3 ದಿನ ಬಳಿಕ ಮೃತದೇಹ ಮೇಲೆ ಬಂದಿದೆ. ಮತ್ತೆ ದೇಹಕ್ಕೆ ಕಲ್ಲನ್ನು ಕಟ್ಟಿ ಹಾಕಿದ್ದಾರೆ. ಮತ್ತೆ 2 ದಿನದ ಬಳಿಕ ಶವ ತೇಲಿ ಮೇಲೆ ಬಂದಿದೆ. ಆಗ ಕೊಳೆತ ದೇಹವನ್ನು ಸ್ವಿಫ್ಟ್ (KA-41 MA-9636) ಕಾರಿನಲ್ಲಿ ತೆಗೆದು ಕೊಂಡು ಹೋಗಿ ಗುಂಡಿಯಲ್ಲಿ ಮುಚ್ಚಿಹಾಕಿದ್ದಾರೆ.
ಪ್ರಕರಣ ಸಂಬಂಧ A1 ವಿಶಾಲ್, A2 ವಿನಯ್ ಪ್ರಸಾದ್ ಅಲಿಯಾಸ್ ವಿಕ್ಕಿ, A4 ಕರಣ್ ಪೈ ಅಲಿಯಾಸ್ ಕರ್ಣ, A5 ವಿನೋದ್ ಕುಮಾರ್ ನನ್ನು ಬಂಧಿಸಲಾಗಿದೆ. A3 ಶಾಂತಕುಮಾರ್ ಅಲಿಯಾಸ್ ಶಾಂತ ತಲೆ ಮರೆಸಿಕೊಂಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶರತ್ ಆಚಾರ್ಯ ಕಾಲೇಜಿನಲ್ಲಿ ಇಂಜಿನಿಯರ್ 3ನೇ ಸೆಮಿಸ್ಟರ್ ಓದುತ್ತಿದ್ದ. ಅಪಹರಣವಾದ ಬಳಿಕವೂ ವಿಶಾಲ್, ಶರತ್ ಮನೆಗೆ ಬಂದು ಹೋಗುತ್ತಿದ್ದ. ಶರತ್ ತಂದೆಗೆ ಅಲ್ಲಿ ವಿಚಾರಿಸಿ, ಇಲ್ಲಿ ವಿಚಾರಿಸಿ ಎಂದು ತನಿಖೆಯ ದಿಕ್ಕು ತಪ್ಪಿಸುತ್ತಿದ್ದ. ಮೂಲತಃ ಕೇರಳದವನಾದ ವಿಶಾಲ್, ಕಳೆದ ಎರಡು ವರ್ಷದಿಂದ ಬೆಂಗಳೂರಿನ ಉಲ್ಲಾಳ ಬಳಿ ಸ್ವಂತ ಮನೆ ಖರೀದಿಸಿ ಇಲ್ಲಿಯೇ ವಾಸವಿದ್ದ.