ಕರ್ನಾಟಕ ದೇಶದಲ್ಲಿಯೇ ಭ್ರಷ್ಟಾಚಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ ಎನ್ನುವ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸರಕಾರವಿದ್ದಾಗ ಯಾವ ರೀತಿ ಭ್ರಷ್ಟಾಚಾರ ನಡೆದಿತ್ತು ಎಂದು ಯಡಿಯೂರಪ್ಪ ಅವರನ್ನೇ ಕೇಳಿದ್ರೆ ಹೇಳುತ್ತಿದ್ದರು ಎಂದು ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಮ್ಮ ಪಕ್ಕದಲ್ಲಿಯೇ ಕುಳಿತಿದ್ದ ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಬಗ್ಗೆ ಕೇಳಬೇಕಾಗಿತ್ತು. ಅವರು ಬಿಜೆಪಿ ಸರಕಾರದಲ್ಲಿ ಯಾವ ರೀತಿ ಭ್ರಷ್ಟಾಚಾರ ನಡೆದಿತ್ತು ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಯಾವುದೇ ದಾಖಲೆಗಳಿಲ್ಲದೇ ರಾಜ್ಯ ಸರಕಾರದ ವಿರುದ್ಧ ಆರೋಪ ಮಾಡುವ ಪ್ರಧಾನಿ ಮೋದಿಯದ್ದು ನಾಚಿಕೆಗೇಡಿತನ ಮತ್ತು ಬೇಜವಾಬ್ದಾರಿಯಲ್ಲಯೇ ಮತ್ತೇನು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಇಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಮಾತನಾಡಲಿಲ್ಲ. ಸುಳ್ಳಿನ ಕಂತೆ, ಪೊಳ್ಳಿನ ಆರೋಪ ಮಾಡಿ ಯಡಿಯೂರಪ್ಪ ಲೆವೆಲ್‌ಗೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರಗಳು ಬಹಿರಂಗವಾಗುತ್ತವೆ ಎನ್ನುವ ಕಾರಣದಿಂದ ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 9 ವರ್ಷಗಳ ಕಾಲ ಲೋಕಾಯುಕ್ತರನ್ನೇ ನೇಮಿಸಲಿಲ್ಲ. ಇದೀಗ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.