ಬ್ಲ್ಯಾಕ್ ಮನಿಯನ್ನು ವೈಟ್ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಸಂಸದ ಶ್ರೀರಾಮುಲು ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೆಮಠ್ ಒತ್ತಾಯಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಪ್ಪು ಹಣ ತಡೆಗಟ್ಟುವ ಉದ್ದೇಶದಿಂದ ದೇಶಾದ್ಯಂತ ಏಕಾಏಕಿ 500, 1000 ಮುಖಬೆಲೆಯ ನೋಟ್ ಬ್ಯಾನ್ ಮಾಡಿದ ನಂತರ 125 ಕೋಟಿ ಬ್ಲ್ಯಾಕ್ ಮನಿ ಖರ್ಚು ಮಾಡಿ ಮಾಜಿ ಸಚಿವ ಜನಾರ್ಧನ ರೆಡ್ಡಿ ತಮ್ಮ ಪುತ್ರಿಯ ಅದ್ಧೂರಿ ವಿವಾಹ ಮಾಡಿದ್ದಾರೆ. ಇತ್ತ ಸಂಸದ ಶ್ರೀರಾಮುಲು 100 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಕಟ್ಟಿದ್ದಾರೆ. ಜನಸಾಮಾನ್ಯರು ದಿನಕ್ಕೆ 2 ಸಾವಿರ ರೂಪಾಯಿ ಪಡೆಯಲು ಪರದಾಡುತ್ತಿದ್ದಾರೆ. ಆದರೆ, ಇಂತವರು ಬ್ಲ್ಯಾಕ್ ಮನಿಯನ್ನು ವೈಟ್ ಮಾಡುವ ದಂಧೆಯಲ್ಲಿ ತೊಡಗಿ ದೇಶದಲ್ಲಿ ಆರ್ಥಿಕ ಅಪರಾಧಗಳನ್ನು ಎಸಗಿದ್ದಾರೆ ಎಂದು ಕಿಡಿ ಕಾರಿದರು.
ಸಿಬಿಐ ಹಾಗೂ ಸಿಐಡಿ ಅಧಿಕಾರಿಗಳು ಜಂಟಿಯಾಗಿ ಇವರ ಮನೆಗಳ ಮೇಲೆ ದಾಳಿ ನಡೆಸಬೇಕು. ಶ್ರೀರಾಮಲು ತಮ್ಮ ಪಕ್ಷದ ಸಂಸದ ಎಂದು ಪ್ರಧಾನಿ ಮೋದಿ ಅವರು ಸುಮ್ಮನೆ ಇರಬಾರದು. ಈ ಇಬ್ಬರ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹೀರೆಮಠ್ ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ