ಅಗತ್ಯ ವಸ್ತುಗಳನ್ನು ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗಿದೆ.
ಹುಬ್ಬಳ್ಳಿಯಲ್ಲಿ ಔಷಧ, ಕಿರಾಣಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮೇಲೆ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿ 3,49,100 ರೂಪಾಯಿಗಳ ದಂಡ ವಸೂಲಿ ಮಾಡಿದೆ. ಮಾರ್ಚ್ ನಿಂದ ಮೇ 15 ರವರೆಗೆ ಹುಬ್ಬಳ್ಳಿ ವೃತ್ತ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 369 ಔಷಧಿ ಅಂಗಡಿಗಳನ್ನು ತಪಾಸಣೆ ನಡೆಸಿ ಮುಖಗವಸು ಹಾಗೂ ಸ್ಯಾನಿಟೈಸರ್‍ಗಳನ್ನು ಅಧಿಕ ದರಕ್ಕೆ ಮಾಡುತ್ತಿದ್ದವರ ಮೇಲೆ 19 ಮೊಕದ್ದಮೆ ದಾಖಲಿಸಿ 65,000 ರೂಪಾಯಿಗಳ ದಂಡ ವಿಧಿಸಿದ್ದಾರೆ.
441 ನ್ಯಾಯಬೆಲೆ ಅಂಗಡಿಗಳ ತಪಾಸಣೆ ಮಾಡಿ, ನಿಯಮ ಉಲಂಘಿಸಿದವರ ವಿರುದ್ಧ 136 ಮೊಕದ್ದಮೆ ದಾಖಲಿಸಿ 1,75,000 ರೂಪಾಯಿಗಳ ದಂಡ ವಿಧಿಸಿದ್ದಾರೆ. 271 ಕಿರಾಣಿ ಅಂಗಡಿಗಳ ತಪಾಸಣೆ ನಡೆಸಿ, ದಿನ ಬಳಕೆ ವಸ್ತುಗಳನ್ನು ಅಧಿಕರಕ್ಕೆ ಮಾರುತ್ತಿದ್ದವರ ಮೇಲೆ 80 ಮೊಕದ್ದಮೆ ದಾಖಲಿಸಿ 1,09,100 ರೂಪಾಯಿಗಳ ದಂಡ ವಿಧಿಸಿದ್ದಾರೆ. ಸಹಾಯಕ ನಿಯಂತ್ರಕ ಮಧುಕರ.ಆರ್.ಘೋಡಕೆ ತಂಡದ ನೇತೃತ್ವದ ವಹಿಸಿದ್ದರು.