ಬೆಂಗಳೂರು: ಕೊರೊನಾ ಕೊಂಚ ತಗ್ಗಿದೆ. ಹೀಗಾಗಿ ಜನರ ಜೀವನ ಸಹಜ ಸ್ಥಿತಿಯತ್ತ ಸಾಗುತ್ತಿದೆ. ಎರಡು ವರ್ಷಗಳಿಂದ ಮುಚ್ಚಿದ್ದ ಶಾಲಾ ಕಾಲೇಜುಗಳು ಆರಂಭವಾಗಿವೆ.
ಈಗಾಗಿ ಬಿಎಂಟಿಸಿ ಕೂಡ ಪಾಸ್ ವಿತರಣೆ ಮಾಡೋದಕ್ಕೆ ಶುರು ಮಾಡಿದೆ.
ನವೆಂಬರ್ 14 ರಿಂದ ಬಿಎಂಟಿಸಿಯಿಂದ ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ಮಾಡಲಾಗುತ್ತೆ. ಬೆಂಗಳೂರು ಒನ್ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಪಾಸ್ ಪಡೆಯಬಹುದು. ಈ ಕೇಂದ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6.30ರ ತನಕ ಪಾಸ್ ಗಳು ದೊರೆಯುತ್ತವೆ.
ಪಾಸ್ ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸೇವಾ ಸಿಂಧು ಅಥವಾ ಬಿಎಂಟಿಸಿ ವೆಬ್ ಸೈಟ್ ನಲ್ಲೇ ಅರ್ಜಿ ಹಾಕಬಹುದು. ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳಿಂದ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಅನುಮೋದಿಸಲಾಗುವುದು. ಈ ಕುರಿತು ಸೂಚನೆ ಲಭ್ಯವಾದ ನಂತರ ವಿದ್ಯಾರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾಸ್ ವಿತರಣೆಗಾಗಿ ಬೆಂಗಳೂರು ಒನ್ ಕೇಂದ್ರದಲ್ಲಿ ದಿನಾಂಕ ಮತ್ತು ಸಮಯ ನಿಗದಿಪಡಿಸಿಕೊಳ್ಳಬೇಕು. ಬೆಂಗಳೂರು ಒನ್ ಕೇಂದ್ರಗಳಿಗೆ ಬರುವಾಗ ಶಿಕ್ಷಣ ಸಂಸ್ಥೆಯ ಗುರುತಿನ ಚೀಟಿ, ಶುಲ್ಕ ರಸೀದಿ, ಶಾಲಾ ಮುಖ್ಯಸ್ಥರು ನೀಡುವ ದೃಢೀಕರಣ ಪತ್ರವನ್ನು ತರಬೇಕು ಎಂದು ಬಿಎಂಟಿಸಿ ಹೇಳಿದೆ.