ಮಳೆ ಅನಾಹುತ ಸೇರಿದಂತೆ ಮಹಾನಗರದ ನಾಗರಿಕರ ಕುಂದು-ಕೊರತೆ ನಿವಾರಿಸಿ ಸಕಾಲಕ್ಕೆ ಸೌಲಭ್ಯ ಕಲ್ಪಿಸಲು ಕೇಂದ್ರೀಕೃತ ಪ್ರಾಧಿಕಾರ ರಚನೆ ಅಗತ್ಯವಾಗಿದೆ. ಹೀಗಂತ ನೂತನ ಬಿಜೆಪಿ ಸಂಸದ ಹೇಳಿದ್ದಾರೆ.
ನೂತನ ಸಂಸದ ಡಿ.ವಿ ಸದಾನಂದಗೌಡ ಸರಣಿ ಟ್ವೀಟ್ ಮೂಲಕ ಈ ವಿಷ್ಯ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನ ನಾಗರಿಕ ಸೌಲಭ್ಯಗಳ ಕುಂದು ಕೊರತೆಯನ್ನು ಹದ್ದು ಬಸ್ತಿನಲ್ಲಿಡಲು, ಬೆಳೆಯುತ್ತಿರುವ ನಮ್ಮ ನಗರ ಬೆಂಗಳೂರಿನ ನಾಗರಿಕರಿಗೆ ಕ್ಲಪ್ತ ಸಮಯದಲ್ಲಿ ಬೇಕಾದ ಸೌಲಭ್ಯಗಳನ್ನು ಜಾರಿಗೊಳಿಸಲು ಕೇಂದ್ರೀಕೃತ ಪ್ರಾಧಿಕಾರವೊಂದರ ರಚನೆ ಅತ್ಯಂತ ಪ್ರಸ್ತುತ ಮತ್ತು ಅತ್ಯಗತ್ಯ. ಈ ಕೇಂದ್ರೀಕೃತ ಪ್ರಾಧಿಕಾರ ರಚನೆಗೆ ಪಕ್ಷಾತೀತ ನಿರ್ಣಯ ಬೇಕು. ಚುನಾಯಿತ ಪ್ರತಿನಿದಿಗಳು, ಸಮರ್ಪಕ ಅಧಿಕಾರಿಗಳು ಮತ್ತು ಕೆಲ ನಾಗರಿಕರನ್ನು ಒಳಗೊಂಡ ಈ ಪ್ರಾಧಿಕಾರ ನಿಯಮಾನುಸಾರ ರಚನೆಯಾಗಿ ತನ್ನ ಪರಿಮಿತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ಬೆಂಗಳೂರನ್ನು ನಾಗರಿಕ ಸೌಲಭ್ಯದಲ್ಲಿ ವಿಶ್ವ ದರ್ಜೆಗೆ ಏರಿಸಲು ಸಾಧ್ಯ ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಬೆಸ್ಕಾಂ,ಬಿಡಬ್ಲ್ಯುಎಸ್ಎಸ್ಬಿ, ಬಿಬಿಎಂಪಿ, ಬಿಟಿಪಿ, ಆರ್ಡಬ್ಲ್ಯುಎ, ಅರಣ್ಯ, ಅಗ್ನಿಶಾಮಕ, ಆರೋಗ್ಯ, ಪರಿಸರ, ಕೆರೆ ಸಂರಕ್ಷಣಾ ಪ್ರಾಧಿಕಾರಗಳನ್ನೊಳಗೊಂಡ ಈ ಕೇಂದ್ರೀಕೃತ ಪ್ರಾಧಿಕಾರ ಮಳೆ ಅನಾಹುತ, ಯೋಜನೆಗಳ ಅನುಷ್ಠಾನದಲ್ಲಿ ಆಗಬಹುದಾದ ವಿಳಂಬ, ನಗರ ಅಭಿವೃದ್ಧಿ ಹೆಸರಿನಲ್ಲಿ ಕಮಿಷನ ಲೂಟಿ ಹೊಡೆಯುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳನ್ನು ಹುಟ್ಟಡಗಿಸಲು ನೆರವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.