ಬೆಂಗಳೂರು: 1 ರಿಂದ 5 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಬ್ರೇಕ್ ಹಾಕಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ಪೋಷಕರು ಶಾಲೆಗಳ ಶುಲ್ಕ ಕಡಿಮೆ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿ ಎಂಬ ಒತ್ತಾಯ ಕೇಳಿಬರುತ್ತಿದೆ.
ಆನ್ ಲೈನ್ ಶಿಕ್ಷಣ ನಡೆಸದಂತೆ ತಜ್ಞರ ಅಭಿಪ್ರಾಯದ ಮೇರೆಗೆ ಸಚಿವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಆನ್ ಲೈನ್ ಶಿಕ್ಷಣ ನೀಡುತ್ತೇವೆಂಬ ನೆಪದಲ್ಲಿ ಖಾಸಗಿ ಶಾಲೆಗಳಿಗೆ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಹಾಗಿಲ್ಲ.
ಶಾಲೆ ಆರಂಭಿಸಲು ಸರ್ಕಾರ ಆದೇಶಿಸುವಾಗಿ ಸೆಪ್ಟೆಂಬರ್ ಆದರೂ ಅಚ್ಚರಿಯಿಲ್ಲ. ಅಂದರೆ ಬರೋಬ್ಬರಿ ಈ ಶೈಕ್ಷಣಿಕ ವರ್ಷದಲ್ಲಿ ಎರಡು-ಮೂರು ತಿಂಗಳು ಶಾಲೆ ಕಟ್ ಆಗುವುದಂತೂ ಪಕ್ಕಾ. ಆದರೆ ಖಾಸಗಿ ಶಾಲೆಗಳು ಶಾಲೆ ಆರಂಭ ಯಾವಾಗ ಎಂದೇ ಗೊತ್ತಿಲ್ಲದೇ ಹೋದರೂ ವರ್ಷದ ಪೂರ್ತಿ ಶುಲ್ಕವನ್ನು ವಸೂಲಿ ಮಾಡಲು ಈಗಾಗಲೇ ಶುರು ಮಾಡಿಕೊಂಡಿವೆ.
ಇದಕ್ಕೆ ಬ್ರೇಕ್ ಹಾಕಬೇಕು ಮತ್ತು ಈ ವರ್ಷ ಪೂರ್ತಿ ಶಾಲೆ ನಡೆಯದೇ ಇರುವ ಕಾರಣಕ್ಕೆ ಶುಲ್ಕ ಕಡಿತ ಮಾಡಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಈ ಬಗ್ಗೆಯೂ ಸಚಿವರು ಮುಂದಿನ ದಿನಗಳಲ್ಲಿ ಗಮನಹರಿಸುವ ಸಾಧ‍್ಯತೆಯಿದೆ.