ನಮ್ಮ ಪಕ್ಷ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸೀಟು ಗೆಲ್ಲಲಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ದೇಶದ ಗೆಲುವಿನ ಓಟ ಮುಂದುವರಿಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ತಿಳಿಸಿದರು . ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅವರು, ಗ್ಯಾರಂಟಿ ವಿಚಾರದಲ್ಲಿ ಕಾದು ನೋಡುತ್ತೇನೆ; ಯಾವ ರೀತಿ, ಎಷ್ಟು ಜನರಿಗೆ ಕೊಡುತ್ತಾರೆ ಎಂಬುದರ ಆಧಾರದಲ್ಲಿ ಸಮಾಜ ಪ್ರತಿಕ್ರಿಯೆ ಕೊಡಲಿದೆ. ಬಿಜೆಪಿ, ಮೋದಿಯವರು ಹೊಸ ಸಂಸತ್ ನಿರ್ಮಿಸಿದ್ದಾರೆ ಎಂಬುದೇ ಅವರಿಗೆ ಸಂಕಟ. ಅದಕ್ಕಾಗಿ ಅವರ ವಿರೋಧ. ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ನಿಜವಾದ ಕಾಳಜಿ ಇದ್ದರೆ ಅವರ ಎದುರು ಯಶವಂತ ಸಿನ್ಹರನ್ನು ನಿಲ್ಲಿಸುವ ಅವಶ್ಯಕತೆ ಇರಲಿಲ್ಲ. ಅವಿರೋಧ ಆಯ್ಕೆ ಮಾಡಬಹುದಿತ್ತು. ಅವರನ್ನು ರಾಷ್ಟ್ರಪತ್ನಿ ಎಂದು ಕರೆದು ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು. ಸಂಸತ್ ನಿರ್ಮಾಣಕ್ಕೆ ವಿಳಂಬ, ಮೊತ್ತ ಹೆಚ್ಚಳ, ಲೂಟಿ ಹೊಡೆಯಲು ಅವಕಾಶ ಆಗಲಿಲ್ಲ ಎಂದು ಈ ಟೀಕೆ ಮಾಡುತ್ತಿದ್ದಾರೆ ಎಂದರು.