ಹೊಸ ದಿಲ್ಲಿ : ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ಹಾವಳಿ ಉಲ್ಬಣಿಸಿರುವ ನಡುವೆಯೇ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನ ಸಭೆ ಚುನಾವಣೆ ಸನ್ನಿಹಿತಗೊಂಡಿದೆ.
ಹೊಸ ವರ್ಷದ ಆರಂಭದಲ್ಲಿ ನಡೆಯಬೇಕಿರುವ ಚುನಾವಣೆಯು ಸೋಂಕಿನ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗುವ ಸಾಧ್ಯತೆ ಕಡಿಮೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಕಳೆದೆರಡು ವಾರಗಳಿಂದ ದೇಶದಲ್ಲಿ ಓಮಿಕ್ರಾನ್ ಸೋಂಕು ಪ್ರಸರಣ ತೀವ್ರಗೊಂಡಿದೆ. ಹೀಗಾಗಿ ಸೋಂಕು ಪರಿಸ್ಥಿತಿ ಕುರಿತು ಚುನಾವಣಾ ಆಯೋಗವು ಸೋಮವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಜತೆ ಚರ್ಚೆ ನಡೆಸಿತು.
ಚುನಾವಣೆಗೆ ಸಜ್ಜಾಗಿರುವ ರಾಜ್ಯಗಳಲ್ಲಿನ ಲಸಿಕೆ ನೀಡಿಕೆ ಪ್ರಮಾಣ ಮತ್ತು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಕುರಿತು ವಿವರ ನೀಡುವಂತೆ ಹಾಗೂ ಈ ರಾಜ್ಯಗಳಲ್ಲಿ ಲಸಿಕೆ ಅಭಿಯಾನಕ್ಕೆ ವೇಗ ನೀಡುವಂತೆ ಆಯೋಗವು ಆರೋಗ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿದೆ.
'ವಾಸ್ತವ ಸ್ಥಿತಿ ಗತಿಯ ಆಧಾರದ ಮೇಲೆ ಚುನಾವಣಾ ಕಾರ್ಯತಂತ್ರ ರೂಪಿಸಲು ನಿರ್ಧರಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಕೋವಿಡ್ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಲಾಗುತ್ತದೆ. ಅದಕ್ಕೂ ಮೊದಲು ಆಯೋಗದ ತಜ್ಞರ ತಂಡ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಲಿದೆ' ಎಂದು ಆಯೋಗದ ಮೂಲಗಳು ತಿಳಿಸಿವೆ.
ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶ ಚುನಾವಣೆಯನ್ನು ಒಂದೆರಡು ತಿಂಗಳು ಮಟ್ಟಿಗೆ ಮುಂದೂಡಲು ಸಾಧ್ಯವೇ ಪರಿಶೀಲಿಸಿ ಎಂದು ಚುನಾವಣಾ ಆಯೋಗವನ್ನು ಕೇಳಿದೆ.