ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ಬೆಂಗಳೂರಿನ ನೃಪತುಂಗ ರಸ್ತೆಯನ್ನ ಇಂದಿನಿಂದ 2 ತಿಂಗಳು ಬಂದ್ ಮಾಡಲಾಗಿದೆ. ಬಿಬಿಎಂಪಿಯ ಟೆಂಡರ್ ಶ್ಯೂರ್ ಕಾಮಗಾರಿ ಹಿನ್ನೆಲೆಯಲ್ಲಿ ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 14 ಮೀಟರ್ ರಸ್ತೆಯಲ್ಲಿ ಸದ್ಯ 7 ಮೀಟರ್ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೀಗಾಗಿ, ಅರ್ಧ ರಸ್ತೆಯಲ್ಲಿ ಸರ್ಕಾರಿ ಬಸ್ ಮತ್ತು ಸರ್ಕಾರಿ ವಾಹನಗಳಿಗೆ ಪ್ರವೇಶ ನೀಡಲಾಗಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್, ಮಾರ್ಥಾಸ್ ಆಸ್ಪತ್ರೆ, ಲೋಕೋಪಯೋಗಿ ಇಲಾಖೆ ಕಚೇರಿಗಳು, ಆರ್`ಬಿಐ, ಡಿಜಿಪಿ ಕಚೇರಿಗಳು ಇದೇ ರಸ್ತೆಯಲ್ಲಿರುವುದರಿಂದ ಸಾರ್ಬಜನಿಕರು ಸಂಕಷ್ಟಕ್ಕೆ ತುತ್ತಾಗುವುದು ಖಂಡಿತಾ. ಅದರಲ್ಲೂ ಕಾರ್ಪೊರೇಶನ್ ಕಡೆಗೆ ಹೋಗುವವರು, ಬಿಬಿಎಂಪಿ ಕಚೇರಿಗೆ ತೆರಳುವವರಿಗೂ ತೊಂದರೆ ಆಗಲಿದೆ.
ಬದಲಿ ಮಾರ್ಗ ಹೇಗೆ..?: ನೃಪತುಂಗ ರಸ್ತೆಯ ಬಂದ್`ನಿಂದಾಗಿ ಜನರಿಗಾಗುವ ತೊಂದರೆ ತಪ್ಪಿಸಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಮೆಜೆಸ್ಟಿಕ್ ಕಡೆಯಿಂದ ಹಡ್ಸನ್ ರಸ್ತೆ ಮಾರ್ಗವಾಗಿ ಕಾರ್ಪೊರೇಶನ್ ಕಡೆ ತೆರಳುವವರು ಕೆ.ಆರ್. ಸರ್ಕಲ್`ನಿಂದ ಕಬ್ಬನ್ ಪಾರ್ಕ್ ಪ್ರವೇಶಿಸಿ ಗ್ರಂಥಾಲಯದ ಬಳಿ ಬಲತಿರುವು ಪಡೆದು ಕಾರ್ಪೊರೇಶನ್ ಕಡೆಗೆ ಹೋಗಬಹುದಾಗಿದೆ. ಈ ರಸ್ತೆಯನ್ನ ಒನ್ ವೇ ಮಾಡಲಾಗಿದೆ.