ಬಿಜೆಪಿ ಸರ್ಕಾರದಲ್ಲಿ ಯಾರಿಗೂ ನ್ಯಾಯ ಸಿಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾರಿಗೂ ನ್ಯಾಯ ಸಿಗುತ್ತಿಲ್ಲ.
ಕೆ.ಎಸ್.ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಶೇ.40ರಷ್ಟು ಕಮಿಷನ್‍ಗೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಈಗಲೂ ನ್ಯಾಯ ಸಿಕ್ಕಿಲ್ಲ. ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.
ಪಿಎಸ್‍ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯ ಮಗ ಭಾಗಿಯಾಗಿದ್ದಾರೆ ಎಂದು ಬಿಜೆಪಿಯ ಶಾಸಕರು, ಸಚಿವರು ನಮ್ಮ ಪಕ್ಷದ ಶಾಸಕಾಂಗ ನಾಯಕರು ನೇರ ಆರೋಪ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಂಗ್ರಹಿಸಲಾದ ಹಣವನ್ನು ಡಿ.ಕೆ.ಶಿವಕುಮಾರ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನು ನೇರ ಸವಾಲು ಮತ್ತು ಒತ್ತಾಯವನ್ನು ಮುಂದಿಡುತ್ತಿದ್ದೇನೆ. ನಾನು ಅಧ್ಯಕ್ಷನಾದ ದಿನದಿಂದ ಈವರೆಗೂ ನಾನು ಮಾಡಿರುವ ಚಟುವಟಿಕೆಗಳನ್ನು ತನಿಖೆ ಮಾಡಿಸಿ ಎಂದು ಸವಾಲ್ ಹಾಕಿದ್ದಾರೆ.