ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜನರಲ್ಲಿ ಗೊಂದಲ ಮೂಡಿಸಲು ಸಿಎಂ ಕಚೇರಿಯಿಂದಲೇ ಈ ಕುರಿತ ಅಪಪ್ರಚಾರ ನಡೆಯುತ್ತಿದೆ. ನಮ್ಮ ಪಕ್ಷದ ಬೆಳವಣಿಗೆಯನ್ನ ತಡೆಯುವ ವ್ಯವಸ್ಥಿತ ಸಂಚು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಖಾಸಗಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳ ಹೊಂದಾಣಿಕೆ ಅಗತ್ಯವಿಲ್ಲ. ಎರಡೂ ಪಕ್ಷಗಳ ಆಡಳಿತವನ್ನ ಜನ ನೋಡಿದ್ದಾರೆ. ಜನರ ಸಮಸ್ಯೆಗಳಿಗೆ ಎರಡೂ ಪಕ್ಷಗಳೂ ಸ್ಪಂದಿಸಿಲ್ಲ. ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ರಾಜ್ಯದ ಜನ ಪರ್ಯಾಯ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಿಂದ ಸಿ.ಎಂ.ಲಿಂಗಪ್ಪನವರನ್ನ ನಾಮ ನಿರ್ದೆಶನ ಮಾಡಿ ನನ್ನನ್ನ ಮುಗಿಸಲೇಬೇಕು ಎಂದು ತಂತ್ರ ಹೆಣೆಯಲಾಗಿದೆ. ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು 150 ಕ್ಷೇತ್ರಗಳಲ್ಲಿ ಗೆದ್ದು ಸಿದ್ದರಾಮಯ್ಯ ಸಿಎಂ, ರೇವಣ್ಣರನ್ನ ಡಿಸಿಎಂ ಮಾಡಲು ನಿರ್ಧಾರವಾಗಿದೆ ಎಂಬ ಮಾಧ್ಯಮಗಳ ವರದಿ ಹಿಂದೆ ಸಿಎಂ ಕಚೇರಿಯ ಕೈವಾಡವಿದೆ. ಜೆಡಿಎಸ್ ಪಕ್ಷದ ಉನ್ನತಿ ತಡೆಯುವ ಸಂಚು ಎಂದು ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಉಪಚುನಾವಣೆಯಲ್ಲಿ ಜೆಡಿಎಸ್ ನೆರವಿನೊಂದಿಗೆ ಜಯ ಗಳಿಸಿದ್ದೇವೆ ಎಂಬಂತೆ ದೇವೇಗೌಡರಿಗೆ ಸಿಎಂ ಅಭಿನಂದನೆ ಸಲ್ಲಿಸಿದರು. ಮೈತ್ರಿ ನಿರ್ಧಾರಕ್ಕೆ ಬರುವುದಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ