ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ಸೇವೆ ನೀಡದ ಕಾರಣ 4 ವರ್ಷದ ಮಗು ಶವವನ್ನು ತಂದೆ ಹೆಗಲ ಮೇಲೆ ಹೊತ್ತು ಸಾಗಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಛತ್ತರ್ ಪುರ್ ಜಿಲ್ಲೆಯಲ್ಲಿ 4 ವರ್ಷದ ಹೆಣ್ಣು ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಬುಕ್ಸ್‌ವಾಹ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಕೊಡಲು ನಿರಾಕರಿಸಿದ್ದರು. ಇದರಿಂದ ಮಗುನವನ್ನು ಹೊತ್ತುಕೊಂಡು ಕೂಡಲೇ ಛತ್ತರ್ ಪುರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.
ಮಂಗಳವಾರ ಆಸ್ಪತ್ರೆಗೆ ದಾಖಲಿಸಿದ ಕೆಲವೇ ಸಮಯದಲ್ಲಿ ಮಗು ಮೃತಪಟ್ಟಿತ್ತು. ಮಗುವಿನ ಅಂತ್ಯ ಸಂಸ್ಕಾರಕ್ಕೆ ಕರೆದೊಯ್ಯಲು ಆಂಬುಲೆನ್ಸ್ ಗೆ ಕುಟುಂಬದವರು ಮನವಿ ಮಾಡಿದರೂ ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಮಗುವಿನ ತಾತಾ ಮನ್ಸೂಖ್ ಅಹಿವಾರ್ ಆಂಬುಲೆನ್ಸ್ ನಲ್ಲಿ ಪಾರ್ಥಿವ ಶರೀರ ಕೊಂಡೊಯ್ಯಲು ಮನವಿ ಮಾಡಿದರು. ಆದರೆ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ನೀಡದೇ ಕಳುಹಿಸಿದರು. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಹಣ ಇಲ್ಲದ ಕಾರಣ ಮಗುವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ತಂದೆ ಹೆಗಲ ಮೇಲೆ ಶವ ಹೊತ್ತು ನಡೆದಿದ್ದಾರೆ.
ಇದೇ ವೇಳೆ ತಂದೆ ಕೂಡ ಸ್ಥಳೀಯ ಗ್ರಾಮ ಪಂಚಾಯಿತಿ ಬಳಿ ಅಂಬುಲೆನ್ಸ್ ಗಾಗಿ ಮನವಿ ಮಾಡಿದ್ದಾರೆ. ಆದರೆ ಅವರು ಕೂಡ ಕಿವಿ ಮೇಲೆ ಹಾಕಿಕೊಂಡಿಲ್ಲ. ಆದರೆ ಆಸ್ಪತ್ರೆ ಈ ಆರೋಪವನ್ನು ನಿರಾಕರಿಸಿದ್ದು, ನಮ್ಮ ಬಳಿ ಯಾರೂ ಬಂದಿಲ್ಲ. ಒಂದು ವೇಳೆ ಬಂದಿದ್ದರೆ ರೆಡ್ ಕ್ರಾಸ್ ಸಂಸ್ಥೆಯಿಂದಾದರೂ ಆಂಬುಲೆನ್ಸ್ ಕೊಡಿಸುತ್ತಿದ್ದೆವು ಎಂದು ಹೇಳಿದ್ದಾರೆ.