ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಅದರಂತೆ ಕಾನೂನು ಪ್ರಕಾರವಾಗಿಯೇ ನಮಗೆ ಸರಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದರು.ಆದರೆ ಅದು ಸಾಧ್ಯವಾಗದ ಕಾರಣ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರ ಯಾವಾಗ ಬೇಕಾದ್ರೂ ಬೀಳಬಹುದು. ಕೆಲ ಸಣ್ಣಪುಟ್ಟ ಗೊಂದಲ, ಅಸಮಾಧಾನಗಳಿಂದಾಗಿ ದೋಸ್ತಿ ಸರಕಾರ ಹಣ್ಣಾಗಿದೆ. ಆ ಹಣ್ಣಿಗೆ ನಿಫಾ ವೈರಸ್ ಅಂಟಿದೆ. ಹೀಗಾಗಿ ಯಾವಾಗಬೇಕಾದ್ರೂ ಸರಕಾರ ಬೀಳಬಹುದು ಎಂದು ವ್ಯಂಗ್ಯವಾಡಿದರು.
ಆದರೆ ಸರಕಾರ ಬಿದ್ದು ಹೋಗಲಿ ಅಂತ ನಾವು ಕಾಯುವುದಿಲ್ಲ. ಅಕಸ್ಮಾತ್ ಸರಕಾರ ಪತನವಾದ್ರೆ ನಾವು ಸರಕಾರ ರಚನೆ ಮಾಡುತ್ತೇವೆ. ಉತ್ತಮ ಆಡಳಿತ ನೀಡುತ್ತೇವೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ, ಯಡಿಯೂರಪ್ಪ ಸಾಫ್ಟ್ ಆದಂತಿದೆ ಎಂಬ ಪ್ರಶ್ನೆಗೆ ಅವರು ಸೋತಿದ್ದಾರೆ. ಅಂಥವರ ಮೇಲೆ ಗದಾಪ್ರಹಾರ ಮಾಡೋದು ಸರಿಯಲ್ಲ ಅಂತ ಯಡಿಯೂರಪ್ಪ ಮೃದುವಾಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ವಿದೇಶದಿಂದ ಕಪ್ಪು ಹಣ ತರುವ ಕುರಿತ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಸದಾನಂದಗೌಡರು,ಈ ವಿಷಯದಲ್ಲಿ ನಾವು ಪ್ರಯತ್ನ ಮಾಡಿದ್ದೇವೆ. ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಈವರೆಗೂ ಎಷ್ಟು ಕಪ್ಪುಹಣ ಬಂದಿದೆ ಎಂಬ ಬಗ್ಗೆ ಅಂಕಿ ಅಂಶ ಪಡೆದು ಹೇಳುವೆ ಎಂದು ಜಾರಿಕೊಂಡರು.
ಅಷ್ಟೇ ಅಲ್ಲ, ವಿದೇಶದಲ್ಲಿರುವ ಕಪ್ಪುಹಣ ತಂದು ದೇಶದ ಜನರ ಖಾತೆಗೆ 15 ಲಕ್ಷ ಜಮಾ ಮಾಡಿಲ್ಲ ಅನ್ನೋದು ದೊಡ್ಡ ಸಂಗತಿ ಅಲ್ಲ. ಕೇವಲ 5 ವರ್ಷದಲ್ಲಿ ತರೋದು ಕಷ್ಟ. ಕಪ್ಪು ಹಣ ನೇರವಾಗಿಜನರ ಖಾತೆಗೆ ಜಮೆ ಆಗಬೇಕು ಅಂತೇನು ಅಲ್ಲ.ಜನರಿಗೆ ಸರಕಾರದಿಂದ ಸಿಗುವ ಸೌಲಭ್ಯ ಕಪ್ಪು ಹಣದ್ದು ಎಂದು ಲೆಕ್ಕಾ ಹಾಕಿಕೊಳ್ಳಿ ಎನ್ನುವ ಮೂಲಕ ಸದಾನಂದಗೌಡ ಯೂಟರ್ನ್ ಹೊಡೆದರು.
ಪೇಜಾವರ ನಮ್ಮ ಸರಕಾರ ಏನೂ ಮಾಡಿಲ್ಲ ಎಂದು ಹೇಳಿಲ್ಲ. ಬದಲಾಗಿ ಕಪ್ಪುಹಣ ತರುವ ಮತ್ತು ಗಂಗಾನದಿ ನೈರ್ಮಲ್ಯೀಕರಣದ ಬಗ್ಗೆ ಗಂಭೀರ ಪ್ರಯತ್ನ ನಡೆಸಿ ಎಂದು ಸಲಹೆ ನೀಡಿದ್ದಾರೆ. ಅದನ್ನು ಸ್ವೀಕರಿಸುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.