ತಾಯಿ, ಸಂಗಾತಿ, ಮಗಳಾಗಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಹೆಣ್ಣಿಗೆ ಗೌರವ ಸಲ್ಲಿಸುವುದಕ್ಕಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಟ್ವೀಟ್ ಮಾಡಿದ್ದು, ತಾಯಿಯಾಗಿ, ಸೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ಎಲ್ಲರ ಜೀವನದಲ್ಲಿ ಮಹತ್ತರ ಪಾತ್ರ ನಿಭಾಯಿಸುವವರೇ ಹೆಣ್ಣು ಮಕ್ಕಳು. ಅವರ ಪ್ರತಿಭೆ ಗುರುತಿಸಿ, ಯಾವುದೇ ಲಿಂಗ ತಾರತಮ್ಯ ಮಾಡದೇ ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲೋಣ ಎಂದು ಶುಭ ಕೋರಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೂಡ ಇಂದು ಹೆಣ್ಣುಮಕ್ಕಳ ರಾಷ್ಟ್ರೀಯ ದಿನ. ಹೆಣ್ಣುಮಗು ಕುಟುಂಬದ ಭಾಗ್ಯಲಕ್ಷ್ಮಿ. ಹೆಣ್ಣುಮಕ್ಕಳಿಗೆ ಸಮಾನ ಶಿಕ್ಷಣ, ಅವಕಾಶ, ಪ್ರೋತ್ಸಾಹ, ರಕ್ಷಣೆಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ವ್ಯವಸ್ಥೆ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ದೃಢಸಂಕಲ್ಪದ ಜೊತೆಗೆ, ನಮ್ಮ ದಾಯಿತ್ವಗಳನ್ನು ನಿರ್ವಹಿಸೋಣ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಸಚಿವ ಆರ್. ಅಶೋಕ್, ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಹೆಣ್ಣು ಸಿರಿ ದೇವಿಯ ರೂಪ.. ಮನೆಯ ಬೆಳಗುವ ನಂದಾದೀಪ.. ಹೆಣ್ಣು ಮಗುವೆಂದು ಮೊಳಕೆಯಲ್ಲೇ ಚಿವುಟದಿರಿ.. ಪ್ರೀತಿಯ ಸವಿಯೆರೆದು ಪೋಷಿಸಿರಿ.. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯಗಳು ಎಂದಿದ್ದಾರೆ.