ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. ನಿನ್ನೆಯೇ ಉಪಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇವತ್ತು ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಆರಂಭಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈ ಉಪಚುನಾವಣೆ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿವೆ.
2 ಕ್ಷೇತ್ರಗಳಲ್ಲಿ ಈಗಾಗಲೇ ಹಣದ ಹೊಳೆ ಹರಿಯುತ್ತಿದ್ದು, ಅಕ್ರಮ ತಡೆಗೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರಿಂದ ನಂಜನಗೂಡಿನಲ್ಲಿ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ನಿಧನದಿಂದ ತೆರವಾದ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮತ್ತು ಕಾಂಗ್ರೆಸ್`ನಿಂದ ಕಳಲೆ ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಇತ್ತ, ಗುಂಡ್ಲುಪೇಟೆಯಲ್ಲಿ ಮಹದೇವ ಪ್ರಸಾದ್ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಮತ್ತು ಬಿಜೆಪಿಯ ನಿರಂಜನ್ ಕುಮಾರ್ ನಡುವೆ ನೇರ ಹಣಾಹಣಿ ಇದೆ.
ಸಚಿವ ಸ್ಥಾನದಿಂದ ಕೈಬಿಟ್ಟ ಅಸ್ತ್ರವನ್ನ ಅನುಕಂಪದ ಅಲೆಯಾಗಿ ಬಳಸಿಕೊಂಡು ಗೆಲುವಿನ ಪತಾಕೆ ಹಾರಿಸಲು ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಮುಂದಾಗಿದ್ದಾರೆ. ಇದು ಸಿದ್ದರಾಮಯ್ಯ ಮತ್ತು ಶ್ರೀನಿವಾಸಪ್ರಸಾದ್ ನಡುವಿನ ಹೋರಾಟ ಎಂದೇ ಬಿಂಬಿಸಲಾಗಿದೆ. ಇತ್ತ, ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್`ಗೆ ಅನುಕಂಪದ ಅಲೆ ವರ್ಕೌಟ್ ಆಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವಿದೆ.
ನಾಳೆ ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಏಪ್ರಿಲ್ 13ಕ್ಕೆ ಫಲಿತಾಂಸ ಹೊರಬೀಳಲಿದೆ.