ಮೈಸೂರು: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಸಿಗಲಿದೆ. ಇಂದು ಬೆಳಿಗ್ಗೆನಿಂದಲೇ ಸಾಂಪ್ರದಾಯಿಕವಾಗಿ ದಸರಾ ಕಾರ್ಯಕ್ರಮಗಳು ಆರಂಭವಾಗಲಿದೆ. ಸಂಸದರಾದ ಮೇಲೆ ಯದುವೀರ್ ಒಡೆಯರ್ ಅವರಿಗೆ ಇದು ಮೊದಲ ದಸರಾ ಹಬ್ಬವಾಗಿದೆ.
ಇಂದು ಬೆಳಿಗ್ಗೆ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ಸಿಗಲಿದೆ. ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ಈ ಬಾರಿ ದಸರಾ ಉದ್ಘಾಟಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಈಗಾಗಲೇ ಮೈಸೂರಿಗೆ ಆಗಮಿಸಿದ್ದಾರೆ.
ಇನ್ನು, ಸಂಸದರಾದ ಬಳಿಕ ಇದೇ ಮೊದಲ ಬಾರಿಗೆ ಯದುವೀರ್ ಒಡೆಯರ್ ರಾಜಪೀಠದಲ್ಲಿ ಕುಳಿತು ದಸರಾ ಪೂಜಾ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಇಂದಿನಿಂದ ಖಾಸಗಿ ದರ್ಬಾರ್ ಆರಂಭವಾಗಲಿದೆ. ಯದುವೀರ್ ಅವರಿಗೆ ಕಂಕಣಧಾರಣೆ, ಸವಾರಿ ತೊಟ್ಟಿಗೆ, ಪಟ್ಟದ ಆನೆ, ಕುದುರೆ, ಹಸುಗಳು ಆಗಮಿಸಲಿವೆ. 11.35 ರ ನಂತರ ಯದುವೀರ್ ಸಿಂಹಾರೋಹಣ ನೆರವೇರಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಇಂದಿನಿಂದ 10 ದಿನಗಳ ಕಾಲ ಅದ್ಧೂರಿಯಾಗಿ ದಸರಾ ಮಹೋತ್ಸವ ನಡೆಯಲಿದ್ದು, ಅಕ್ಟೋಬರ್ 12 ರಂದು ವಿಶ್ವ ಪ್ರಸಿದ್ಧ ಜಂಬೂ ಸವಾರಿ, ಪಂಜಿನ ಕವಾಯತು ನಡೆಯಲಿದೆ. ಜೊತೆಗೆ ಅರಮನೆ ನಗರಿಯಲ್ಲಿ ಎಂದಿನಂತೆ ಯುವ ದಸರಾ ಕೂಡಾ ಕಳೆ ಕಟ್ಟಲಿದೆ. ಕೋಟ್ಯಾಂತರ ಮಂದಿ ದಸರಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.