ಉಜಳಂಬ : ಸಿಎಂ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಗ್ರಾಮ ವಾಸ್ತವ್ಯ ಬಿಜೆಪಿಗೆ ನುಂಗಲಾರದ ತುಪ್ಪವಾಗಿದೆ ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಉಜಳಂಬದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟೀಕೆ ಮಾಡುವವರಿಗೆಲ್ಲಾ ಉತ್ತರ ಕೊಡಲ್ಲ. ಪ್ರತಿಯೊಬ್ಬರ ನೋವಿಗೆ ಸ್ಪಂದಿಸಿದಾಗ ತೃಪ್ತಿ ಆಗುತ್ತೆ, ಮೂರು ಕಡೆ ಗ್ರಾಮ ವಾಸ್ತವ್ಯ ಮಾಡಿದ್ದೇವೆ, ಜನತಾ ದರ್ಶನದಿಂದ ಜನಸಾಮಾನ್ಯರಿಗೆ ಲಾಭವಾಗಲಿದೆ. ಮುಖ್ಯಮಂತ್ರಿ ಕಚೇರಿಯೇ ಜನತೆಗೆ ನೇರವಾಗಿ ಸ್ಪಂದಿಸಲಿದೆ. ಬಿಜೆಪಿ ಟೀಕೆಗೆ ಉತ್ತರ ಕೊಡುವ ಅಗತ್ಯವಿಲ್ಲ, ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಸೂಕ್ತ ನನ್ನ ಗ್ರಾಮ ವಾಸ್ತವ್ಯ ಬಿಜೆಪಿಗೆ ನುಂಗಲಾರದ ತುಪ್ಪವಾಗಿದೆ. ಅವರ ಪಾಡಿಗೆ ಅವರು ಪ್ರತಿಭಟನೆ ಮಾಡಲಿ, ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ ತಮ್ಮ ವಿದೇಶ ಪ್ರವಾಸ ವಿಚಾರದ ಬಗ್ಗೆ ಮಾತನಾಡಿದ ಅವರು, ಆದಿಚುಂಚನಗಿರಿ ಶ್ರೀಗಳು ನ್ಯೂಜೆರ್ಸಿಯಲ್ಲಿ ದೇಗುಲ ಕಟ್ಟಿಸುತ್ತಿದ್ದಾರೆ. ಶಂಕುಸ್ಥಾಪನೆಗೆ ನಾನೇ ಬರಬೇಕೆಂದು ಶ್ರೀಗಳು ಒತ್ತಾಯ ಮಾಡ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ. ಅಮೇರಿಕಕ್ಕೆ ನನ್ನ ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.