ಮಾನವ ಹಕ್ಕುಗಳು ಮತ್ತು ಘನತೆ ಬಹಳ ಪವಿತ್ರವಾದವು. ಆದರೆ ಭಾರತದಲ್ಲಿ ಪೊಲೀಸ್ ಠಾಣೆಗಳಲ್ಲೇ ಅತಿ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಎನ್ ವಿ ರಮಣ ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ದೆಹಲಿಯ ವಿಜ್ಞಾನ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “ಕಸ್ಟಡಿ ಚಿತ್ರಹಿಂಸೆ ಮತ್ತು ಇತರ ಪೊಲೀಸ್ ದೌರ್ಜನ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಚಾಲ್ತಿಯಲ್ಲಿರುವ ಸಮಸ್ಯೆಗಳು” ಎಂದು ಹೇಳಿದ್ದಾರೆ.
“ಸಾಂವಿಧಾನಿಕ ಘೋಷಣೆಗಳು ಮತ್ತು ಖಾತರಿಗಳ ಹೊರತಾಗಿಯೂ, ಪೋಲಿಸ್ ಠಾಣೆಗಳಲ್ಲಿ ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ಬಂಧಿತ ವ್ಯಕ್ತಿಗಳಿಗೆ ದೊಡ್ಡ ಹಾನಿಯಾಗಿದೆ. ಅತಿ ಬೇಗನೆ ತೆಗೆದುಕೊಳ್ಳುವ ನಿರ್ಧಾರಗಳು ನಂತರ ಆರೋಪಿಯು ತನ್ನನ್ನು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ನಿರ್ಧರಿಸುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಸೌಲಭ್ಯವುಳ್ಳ ವರ್ಗ ಸಹ ಪೊಲೀಸರ ಥರ್ಡ್ ಗ್ರೇಡ್ ಚಿಕಿತ್ಸೆಯಿಂದ (ಪೊಲೀಸರಿಂದ ಹಲ್ಲೆ, ಕಿರುಕುಳ) ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಿಜೆಐ ಹೇಳಿದ್ದಾರೆ. ಆದರೂ ಅವರು ಯಾವುದೇ ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಲಿಲ್ಲ.
ಪೋಲಿಸರ ಅತಿರೇಕಗಳನ್ನು ನಿಯಂತ್ರಣದಲ್ಲಿಡಲು ನಮ್ಮ ಮುಂದಿರುವ ಮಾರ್ಗವೆಂದರೆ, “ಕಾನೂನು ನೆರವು ಮತ್ತು ಉಚಿತ ಕಾನೂನು ನೆರವು ಸೇವೆಗಳ ಲಭ್ಯತೆಯ ಸಾಂವಿಧಾನಿಕ ಹಕ್ಕಿನ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವುದು” ಎಂದು ಅವರು ಸೂಚಿಸಿದರು.
ಕಾನೂನು ಸೇವೆಗಳ ಆ್ಯಪ್ ಬಿಡುಗಡೆ ಅವರು, “ಪ್ರತಿ ಪೊಲೀಸ್ ಠಾಣೆ ಅಥವಾ ಕಾರಾಗೃಹದಲ್ಲಿ ಪ್ರದರ್ಶನ ಫಲಕಗಳು ಮತ್ತು ಬೋರ್ಡ್‌ಗಳನ್ನು ಅಳವಡಿಸಬೇಕು. ಕಾನೂನು ಸೇವೆಗಳ ಪ್ರಾಧಿಕಾರವು ಕೂಡ ದೇಶಾದ್ಯಂತ ಪೊಲೀಸ್ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವ ಕಾರ್ಯಗಾರಗಳನ್ನು ಸಕ್ರಿಯವಾಗಿ ನಡೆಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪರವಾಗಿ ಆರಂಭಿಸಿದ, ಆರೋಪಿಗಳ ಪರ ಕಾನೂನು ಸೇವೆಗಳ ಸುದೀರ್ಘ ಸಂಪ್ರದಾಯವನ್ನು ಭಾರತ ಹೊಂದಿದೆ. “ಒಂದು ಸಂಸ್ಥೆಯಾಗಿ ನ್ಯಾಯಾಂಗವು ನಾಗರಿಕರ ನಂಬಿಕೆಯನ್ನು ಗಳಿಸಲು ಬಯಸಿದರೆ, ನಾವು ಅವರಿಗಾಗಿ ಅಸ್ತಿತ್ವದಲ್ಲಿದ್ದೇವೆ ಎಂದು ಪ್ರತಿಯೊಬ್ಬರಿಗೂ ಭರವಸೆ ಮೂಡಿಸಬೇಕು. ದೀರ್ಘಕಾಲದಿಂದ, ದುರ್ಬಲ ಜನಸಮುದಾಯಗಳು ನ್ಯಾಯ ವ್ಯವಸ್ಥೆಯಿಂದ ಹೊರಗುಳಿದಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಕಾನೂನಿನ ನಿಯಮದಿಂದ ಆಳಲ್ಪಡುವ ಸಮಾಜವಾಗಿ ಉಳಿಯಲು ಬಯಸಿದರೆ, ಹೆಚ್ಚಿನ ಸವಲತ್ತು ಮತ್ತು ಅತ್ಯಂತ ದುರ್ಬಲರ ನಡುವೆ ನ್ಯಾಯದ ಲಭ್ಯತೆಯ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯ. ಮುಂಬರುವ ಎಲ್ಲಾ ಸಮಯದಲ್ಲೂ, ನಮ್ಮ ರಾಷ್ಟ್ರದಲ್ಲಿ ಚಾಲ್ತಿಯಲ್ಲಿರುವ ಸಾಮಾಜಿಕ-ಆರ್ಥಿಕ ವೈವಿಧ್ಯತೆಯ ಅಸಮಾನತೆಯು ಹಕ್ಕುಗಳ ನಿರಾಕರಣೆಗೆ ಎಂದಿಗೂ ಕಾರಣವಾಗಿರುವುದಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು “ಎಂದು ಮುಖ್ಯ ನ್ಯಾಯಮೂರ್ತಿ ರಮಣ ಹೇಳಿದರು.