ಕೇಂದ್ರ ಸರಕಾರದ ಯೋಜನೆಗಳು ಹಾಗೂ ಅವುಗಳ ಲಾಭ ದೇಶದ ಶೇ. 20ಕ್ಕಿಂತ ಕಡಿಮೆ ಜನರಿಗೆ ದೊರೆಯುತ್ತಿದೆ. ಈ ಮೂಲಕ ಬಡವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬಡ, ಮಧ್ಯಮ ಹಾಗೂ ಯುವಜನತೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೂರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಬಡವರ ಹಿತ ಮರೆತು ಕೆಲವು ಉದ್ಯಮಿಗಳ ಪರವಾಗಿ ನಿಂತಿದೆ. ದೇಶದ ಸಾಮಾನ್ಯ ಜನರ ಹಿತವನ್ನು ಮೋದಿ ಮರೆತಿದ್ದಾರೆ ಎಂದು ಹೇಳಿದರು.
ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಿದ್ದ ಭಾರತ ಬಂದ್ ಅಂಗವಾಗಿ ರಾಜಘಾಟ್ ನಿಂದ ರಾಮ್ ಲೀಲಾ ಮೈದಾನವರೆಗೆ ಪಾದಯಾತ್ರೆ ನಡೆಸಿ ಆ ಬಳಿಕ ನಡೆದ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಾತನಾಡಿ, ಕೇಂದ್ರ ಸರಕಾರದ ವಿರುದ್ಧ ಆರೋಪಗಳನ್ನು ಮಾಡಿದರು.