ಬೆಂಗಳೂರು : ರಾಜ್ಯದಲ್ಲಿ 1 ರಿಂದ 8 ನೇ ತರಗತಿ ಆರಂಭದ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಶೀಘ್ರವೇ 1 ರಿಂದ 8 ನೇ ತರಗತಿವರೆಗಿನ ಶಾಲೆ ಪುನರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಆರಂಭಿಸಿದ ಬಳಿಕ ಬರುವ ಪ್ರತಿಕ್ರಿಯೆಗಳು 1ರಿಂದ 8ನೇ ತರಗತಿವರೆಗಿನ ಶಾಲೆ ಪುನರಾರಂಭಿಸಲು ನೆರವಾಗುತ್ತವೆ. ರಾಜ್ಯದ ಎಲ್ಲ ಗ್ರಾಮ, ಪಟ್ಟಣ, ತಾಲೂಕು, ನಗರಗಳಲ್ಲಿ ವಯೋಮಿತಿ ಸಹಿತ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಇದರಿಂದ 1ರಿಂದ 8ನೇ ತರಗತಿ ಶಾಲೆ ಆರಂಭಿಸಲು ಸೂಕ್ತ ಸಿದ್ಧತೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಶಾಲೆಗಳಲ್ಲಿ ಸುರಕ್ಷಾ ಕ್ರಮಗಳು ಪರಿಪಾಲನೆಯಾಗುತ್ತಿರುವ ಕುರಿತು ಬಿಇಒಗಳು ತಮ್ಮ ವ್ಯಾಪ್ತಿಯ ಕನಿಷ್ಠ ಶೇ.50ರಷ್ಟು ಶಾಲೆಗಳಿಗಾದರೂ ಭೇಟಿ ನೀಡಿ ಪರಿಶೀಲಿಸಬೇಕು. ಕೊಠಡಿ ಕೊರತೆಯಾದರೆ ಸಿಬಂದಿ ಕೊಠಡಿ ಬಳಸಿಕೊಳ್ಳಬೇಕು. ಈ ಮೂಲಕ ಶಾಲೆಗಳ ಪುನರಾರಂಭ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.