ಬೆಂಗಳೂರು: ರಾಜ್ಯ ಸರಕಾರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ₹ 180 ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆಯನ್ನು ಸ್ಥಾಪನೆ ಮಾಡುತ್ತಿದೆ. ಈ ವರ್ಷ ₹ 55 ಕೋಟಿ ಬಿಡುಗಡೆ ಮಾಡಿದ್ದು, ಇದೇ ವರ್ಷ ಪೂರ್ಣಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಈ ಶಾಲೆಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲು ಮಾತುಕತೆ ನಡೆದಿದೆ. ಈಗಾಗಲೇ ಪರಿಶೀಲನೆ ನಡೆಸಿದೆ, ರಕ್ಷಣಾ ಇಲಾಖೆ ಅದನ್ನು ಸೈನಿಕ ಶಾಲೆಯಾಗಿ ಪರಿವರ್ತನೆ ಮಾಡುತ್ತದೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಮತ್ತು ವೀರತನದಿಂದ ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೇ ಹೋರಾಟ ಮಾಡಿದ್ದರು. ಕಿತ್ತೂರು ರಾಣಿ ಚೆನ್ನಮ್ಮ ಯುದ್ಧ ಸಾರಿದಾಗ, ದತ್ತುಪುತ್ರ ವಿಚಾರವಾಗಿ ಸೆಡ್ಡು ಹೊಡೆದಾಗ ಅವರ ಶಕ್ತಿಯಾಗಿದ್ದದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಯಾರೇ ಸೆರೆಯಾದಾಗ ರಾಣಿ ಚೆನ್ನಮ್ಮ ಧೃತಿಗೆಡಲಿಲ್ಲ, ಆದರೆ ರಾಯಣ್ಣ ಸೆರೆಯಾದಾಗ ಕುಸಿದು ಬಿದ್ದರು. ರಾಯಣ್ಣನ ಸ್ವಾಮಿನಿಷ್ಠೆ, ಧೈರ್ಯ, ಶೂರತನದ ಮೇಲೆ ಅಷ್ಟೊಂದು ನಂಬಿಕೆ ಇತ್ತು ಎಂದು ಸಿಎಂ ತಿಳಿಸಿದರು.
ನಂದಗಢದಲ್ಲಿ ಸಂಗೊಳ್ಳಿ ರಾಯಣ್ಣ ಸಮಾಧಿ ಪ್ರದೇಶ ಅಭಿವೃದ್ಧಿ, ಹುಟ್ಟೂರು ಸಂಗೊಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ರಾಕ್‌ಗಾರ್ಡನ್ ನಿರ್ಮಾಣ ಮಾಡಲಾಗುತ್ತದೆ. ಇದೆಲ್ಲವೂ ಮುಂದಿನ ಪೀಳಿಗೆಗೆ ಕಿತ್ತೂರು ರಾಣಿ ಚೆನ್ನಮ್ಮ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಯಾವ ರೀತಿ ಹೋರಾಟ ಮಾಡಿದರು ಎಂಬುದನ್ನು ನೆನಪಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಎಲ್ಲ ಶಾಲಾ ಕಾಲೇಜುಗಳಲ್ಲಿ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಅಳವಡಿಸಬೇಕೆಂಬ ಬೇಡಿಕೆಯನ್ನು ಈಡೇರಿಸಲು ಇಂದೇ ಆದೇಶ ಮಾಡಲಾಗುತ್ತದೆ. ಇದಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜರಗಿಸುತ್ತೇನೆ. ರಾಯಣ್ಣನ ವಿಚಾರಧಾರೆಯನ್ನು ಪ್ರಚುರಪಡಿಸಲು ಸರಕಾರ ಬದ್ಧವಾಗಿದೆ ಎಂದ ಸಿಎಂ, ಬೆಂಗಳೂರಿನ ಅನೇಕ ರಸ್ತೆ-ಸಂಸ್ಥೆಗಳಿಗೆ ಬ್ರಿಟಿಷರ ಹೆಸರುಗಳಿವೆ. ಕರ್ನಾಟಕದಲ್ಲಿ ಸಾತಂತ್ರ್ಯ ಹೋರಾಟಗಾರರ ದೊಡ್ಡ ಇತಿಹಾಸವಿದೆ. ಅವುಗಳಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳನ್ನಿಡಲು ಸಮಗ್ರ ಚಿಂತನೆ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶ್ರೀಈಶ್ವರಾನಂದಪುರಿ ಮಹಾಸ್ವಾಮಿ, ಕಂದಾಯ ಸಚಿವ ಆರ್. ಅಶೋಕ್, ಸಂಸದ ಪಿ.ಸಿ. ಮೋಹನ್, ವಾಟಾಳ್ ನಾಗರಾಜ್, ಮಾಜಿ ಸಚಿವ ಎಚ್.ಎಂ. ರೇವಣ್ಣ ಮೊದಲಾದವರಿದ್ದರು.