ರಾಜ್ಯದ ಪ್ರಪ್ರಥಮ ಸರಕಾರಿ ಕ್ರೀಡಾಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ದಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಲಾ ಕ್ರೀಡಾಂಗಣ, ಬಾಲಕಿಯರ ಮತ್ತು ಬಾಲಕರ ವಸತಿ ನಿಲಯ, ಮತ್ತು ತರಗತಿ ಕೊಠಡಿಗಳು, ಹಾಕಿ ಮತ್ತು ಅಥ್ಲೆಟಿಕ್ ಮೈದಾನಗಳಿಗೆ ಖುದ್ದಾಗಿ ಭೇಟಿ ನೀಡಿದ ಶಾಸಕರು, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಕಟ್ಟಡಗಳ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಕಳೆದ 25 ವರ್ಷಗಳಿಂದಲೂ ಸುಣ್ಣ ಬಣ್ಣ ಕಾಣದ ವಸತಿ ಗೃಹಗಳನ್ನು ನೋಡಿದ ಶಾಸಕ ಅಪ್ಪಚ್ಚು ರಂಜನ್ ಶಾಲೆಯ ಅಧಿಕಾರಿ ವರ್ಗದವರು ಏನು ಮಾಡುತ್ತಿದ್ದೀರಾ ಎಂದು ದೊಡ್ಡ ಧ್ವನಿಯಲ್ಲೇ ಪ್ರಶ್ನಿಸಿದರು. ಆದರೆ ರಾಜ್ಯದ ಮಟ್ಟದ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆಗಬೇಕಾಗಿರುವ ಶಾಲೆಯ ವರದಿಯನ್ನು ಬರೆಯಲಾಗಿದೆ ಎಂದಷ್ಟೇ ಉತ್ತರ ಬಂದಿತು.
ನಂತರ ವಸತಿ ಗೃಹಗಳ ವೀಕ್ಷಣೆ ಮಾಡಿದ ಶಾಸಕರು, ಅಲ್ಲಿನ ಗೋಡೆಗಳ ದುರಸ್ತಿಗೆ ತುರ್ತಾಗಿ ಗಮನ ಹರಿಸುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು. ಶಾಲೆಗೆ ಅಗಬೇಕಾಗಿರುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ವರದಿಯನ್ನು ನೀಡುವಂತೆ ಮತ್ತು ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿಕೊಂಡು ಹೋಗುವಂತೆಯೂ ಸಲಹೆ ನೀಡಿದ ಅವರು, ವಿದ್ಯಾರ್ಥಿಗಳಿಂದ ಸಣ್ಣ ದೂರು ಬಂದರೂ ಸಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಣಲುವುದಾಗಿ ಎಚ್ಚರಿಕೆ ನೀಡಿದರು.
ಸುಸಜ್ಜಿತವಾದ ಹಾಕಿ ಮೈದಾನದ ಸದುಪಯೋಗ ಪಡೆದುಕೊಂಡು ಹಾಕಿ ಪಟುಗಳು ರಾಜ್ಯ ಮತ್ತು ರಾಷ್ಟ್ರದ ಮಟ್ಟದಲ್ಲಿ ತಮ್ಮ ಪ್ರತಿಮೆ ತೋರಿಸಿ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲೂ ಸಹ ಕೊಡಗಿನ ಕೂಡಿಗೆ ಕ್ರೀಡಾ ಶಾಲಾ ತಂಡ ಪ್ರತಿನಿಧಿಸುವಂತೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವಂತೆ ಶಿಕ್ಷಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರೋತ್ಸಾಹದ ಸಲಹೆಗಳನ್ನು ನೀಡಿದರು.
ಈ ಸಂದರ್ಭ ಶಾಲೆ ಮುಖ್ಯೋಪಾಧ್ಯಾಯ ದೇವಕುಮಾರ್, ಕ್ರೀಡಾ ತರಬೇತುದಾರರು, ವಸತಿ ನಿಲಯದ ಮೇಲ್ವಿಚಾರಕಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.