ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರು, ಉಪ ಮಹಾಪೌರರು ಮತ್ತು ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಅಧ್ಯಕ್ಷಾಧಿಕಾರಿಯೆಂದು ನೇಮಿಸಿದೆ.
ಸೆಪ್ಟೆಂಬರ್ 22 ರಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಮಹಾನಗರ ಪಾಲಿಕೆಯ ಇಂದಿರಾ ಸ್ಮಾರಕ ಭವನ(ಟೌನ್ ಹಾಲಿನಲ್ಲಿ) ಪ್ರಾದೇಶಿಕ ಆಯುಕ್ತರು ಪಾಲಿಕೆಯ ಸಾಮಾನ್ಯ ಸಭೆ ಕರೆದಿದ್ದಾರೆ.
ಸರ್ಕಾರದ ಆದೇಶದನ್ವಯ ಪಾಲಿಕೆಯ ಮಹಾಪೌರರ ಸ್ಥಾನವು “ಸಾಮಾನ್ಯ(ಮಹಿಳೆ)” ಹಾಗೂ ಉಪ ಮಹಾಪೌರರ ಸ್ಥಾನವು “ಸಾಮಾನ್ಯ(ಮಹಿಳೆ)” ಮೀಸಲಾತಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ. ಇದಲ್ಲದೆ ನಾಲ್ಕು ಸ್ಥಾಯಿ ಸಮಿತಿಗಳಾದ ತೆರಿಗೆ, ಹಣಕಾಸು ಮತ್ತು ಮೇಲ್ಮನವಿ ಸಮಿತಿ. ಲೆಕ್ಕಪತ್ರ ಸ್ಥಾಯಿ ಸಮಿತಿ. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಹಾಗೂ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗಳಿಗೂ ಅಂದು ಚುನಾವಣೆ ನಡೆಯಲಿದೆ. ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಅವಶ್ಯವಿದ್ದಲ್ಲಿ ಚುನಾವಣೆ ಸಹ ನಡೆಸಲಾಗುವುದೆಂದು ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸುವ ಮಹಾನಗರ ಪಾಲಿಕೆಯ ಸದಸ್ಯರು ಸಲ್ಲಿಸುವ ನಾಮಪತ್ರಗಳನ್ನು ಸ್ವೀಕರಿಸಲು ಮಹಾನಗರ ಪಾಲಿಕೆಯ ಆಯುಕ್ತರನ್ನು ಅಧಿಕೃತ ಅಧಿಕಾರಿಯೆಂದು ನೇಮಿಸಲಾಗಿದೆ. ನಾಮಪತ್ರಗಳನ್ನು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 1 ಗಂಟೆಯೊಳಗಾಗಿ ಅಧಿಕೃತ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.