ಮಾಜಿ ಸಚಿವ ಹಾಗೂ ಕೈ ಪಡೆಯ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಬಂಧನ ವಿರೋಧಿಸಿ ಕಿಕ್ಕೇರಿ ಪಟ್ಟಣದಲ್ಲಿ ಮೈತ್ರಿಪಕ್ಷಗಳ ಮುಖಂಡರಿಂದ ಭಾರೀ ಪ್ರತಿಭಟನೆ ನಡೆದಿದೆ.
ಮಂಡ್ಯದ ಕಿಕ್ಕೇರಿಯಲ್ಲಿ ರಸ್ತೆ ತಡೆ, ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜಕೀಯ ದುರುದ್ಧೇಶದ ಮೊಕದ್ದಮೆ ಹಿಂಪಡೆಯಲು ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಲಾಯಿತು.
ಕರ್ನಾಟಕ ರಾಜ್ಯದ ಮಾಜಿ ಸಚಿವ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರದ ಆದಾಯ ತೆರಿಗೆ ಇಲಾಖೆಯು ಹವಾಲಾ ಹಣ ಪ್ರಕರಣದಲ್ಲಿ ದುರುದ್ದೇಶಪೂರ್ವಕವಾಗಿ ಬಂಧಿಸಿದೆ. ತನಿಖೆಗೆ ಸಹಕಾರ ನೀಡಲಿಲ್ಲವೆಂದು ಸುಳ್ಳು ದೂರನ್ನು ದಾಖಲಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿದ ಮೈತ್ರಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಟಯರ್ ಗಳನ್ನು ಸುಟ್ಟು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಷಾ ಹಾಗೂ ಬಿ ಜೆ ಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಕೂಡಲೇ ಇಡಿ ಇಲಾಖೆಗೆ ನಿರ್ದೇಶನ ನೀಡಿ ಡಿ.ಕೆ.ಶಿವಕುಮಾರ್ ಅವರನ್ನು ಬಿಡುಗಡೆಗೊಳಿಸಿ ರಾಜಕೀಯ ದುರುದ್ಧೇಶದಿಂದ ದಾಖಲಿಸಿರುವ ಪ್ರಕರಣವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.