ತಮ್ಮ ಪತ್ನಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಜೈಲು ಪಾಲಾಗಿದ್ದ ಯುವಕನೊಬ್ಬ ಜಾಮೀನಿನ ಮೇಲೆ ಹೊರ ಬಂದು ನಿಜವಾದ ಆರೋಪಿಯನ್ನು ಪತ್ತೆ ಹಚ್ಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮತ್ತೀಗ ಆರೋಪಿ ಗಿರೀಶ್ ಪಟ್ನಾಯಕ್ ಎಂಬಾತನನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಎಂಜಿನಿಯರ್ ಆಗಿದ್ದ ಜ್ಯೋತ್ಸ್ನಾ ತನ್ನದೇ ವೃತ್ತಿಯಲ್ಲಿದ್ದ ವೆಂಕಟ್ ಎಂಬಾತನನ್ನು ವಿವಾಹವಾಗಿದ್ದರು. ಕಳೆದ ವರ್ಷದಂತ್ಯದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ವೆಂಕಟ್ ಕಿರುಕುಳವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ಆಕೆಯ ಪೋಷಕರು ದೂರು ನೀಡಿದ್ದರಿಂದ ಅಮಾಯಕ ವೆಂಕಟ್ ಜೈಲುಪಾಲಾಗಿದ್ದರು. ಕೆಲ ದಿನಗಳ ಜಾಮೀನಿನ ಮೇಲೆ ಹೊರ ಬಂದ ಅವರು ತಮ್ಮ ಮೇಲಿನ ಸುಳ್ಳು ಆರೋಪವನ್ನು ತೊಳೆದುಕೊಳ್ಳುವ ನಿರ್ಧಾರ ಮಾಡಿದರು.
ತಮ್ಮ ಪತ್ನಿ ಕಾಲೇಜು ದಿನಗಳಲ್ಲಿ ಗಿರೀಶ್ ಪಟ್ನಾಯಕ್ ಎಂಬಾತನನ್ನು ಪ್ರೀತಿಸುತ್ತಿದ್ದರು ಎಂಬ ಮಾಹಿತಿ ವೆಂಕಟ್‌ಗೆ ಸಿಕ್ಕಿತ್ತು. ಮೊಬೈಲ್, ಸಾಮಾಜಕ ಜಾಲತಾಣಗಳನ್ನು ಜಾಲಾಡಿ 4,000ಪುಟಗಳ ಸಾಕ್ಷ್ಯವನ್ನು ಸಂಗ್ರಹಿಸುವಲ್ಲಿ ಸಫಲರಾದ ಅವರು ಗಿರೀಶ್ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾಲೇಜು ದಿನಗಳಲ್ಲಿ ತಾವು ಪ್ರೀತಿಸುತ್ತಿದ್ದ ಗಿರೀಶ್ ಜತೆ ಜ್ಯೋತ್ಸ್ನಾ ಮದುವೆ ನಂತರವೂ ಪ್ರೇಮ ಸಂಬಂಧವನ್ನು ಮುಂದುವರೆಸಿದ್ದಳು. ತಾನು ಪತಿಯನ್ನು ಬಿಟ್ಟು ಬರುತ್ತೇನೆ. ನನ್ನನ್ನು ಮದುವೆಯಾಗು ಎಂದು ಆತನಿಗೆ ದುಂಬಾಲು ಬಿದ್ದಿದ್ದಳು. ಇದು ಗಿರೀಶ್ ಮನೆಯವರಿಗೆ ಗೊತ್ತಾಗಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದರಿಂದ ನೊಂದ ಆಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿಗೆ ಶರಣಾಗುತ್ತಿರುವುದನ್ನು ಸಹ ತನ್ನ ಪ್ರೇಮಿಗೆ ಮೊಬೈಲ್ ಸಂದೇಶದ ಮೂಲಕ ಜ್ಯೋತ್ಸ್ನಾ ತಿಳಿಸಿದ್ದರು. ಆಕೆಯ ಸಾವಿನ ಬಳಿಕ ಗಿರೀಶ್ ಬೆಂಗಳೂರು ತೊರೆದಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆತ್ಮಹತ್ಯೆ ಬಳಿಕ ಜ್ಯೋತ್ಸ್ನಾ ಮೊಬೈಲ್‌ಗೆ ಕರೆ: ‘ಆತ್ಮಹತ್ಯೆ ಮಾಡಿಕೊಳ್ಳುವ ವೇಳೆಯೂ ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಗಿರೀಶ್ ಮೊಬೈಲ್‌ಗೆ ಜ್ಯೋತ್ಸ್ನಾ ಸಂದೇಶ ಕಳುಹಿಸಿದ್ದರು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ