ದುರುದ್ದೇಶಪೂರಿತ ಪ್ರಕರಣ ದಾಖಲಿಸಿ, ಮಾನಹಾನಿ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ 7,62,268 ರೂ.ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪ್ರಧಾನ ಸಿವಿಲ್ ನ್ಯಾಯಾಲಯ 7,62,268 ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. 2013ರ ನ. 25 ರಂದು ಶ್ರೀರಂಗಪಟ್ಟಣದ ಹೊಟೇಲ್ ವೊಂದರಲ್ಲಿ ಮಂಡ್ಯ ನಗರಸಭೆ ಸದಸ್ಯ ಅರುಣ್ ಕುಮಾರ್ ಎಂಬುವರು 25 ಲಕ್ಷ ರೂ. ಇಟ್ಟುಕೊಂಡು ವ್ಯಕ್ತಿವೊಬ್ಬರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಆಗಿನ ಪ್ರೊಬೇಷನರಿ ಡಿವೈಎಸ್ಪಿ ಆಗಿದ್ದ ಗೀತಾ, ಸಿಪಿಐ ನಾಗೇಗೌಡ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ, ಹಣ ವಶಕ್ಕೆ ಪಡೆದುಕೊಂಡು ಖೋಟಾ ನೋಟು ಖರೀದಿ ದಂಧೆ ಪ್ರಕರಣ ದಾಖಲಿಸಿದ್ದರು.
ಆದರೆ ಸೂಕ್ತ ಸಾಕ್ಷಿ ಒದಗಿಸಿ ಸಾಬೀತು ಮಾಡುವಲ್ಲಿ ವಿಫಲವಾಗಿದ್ರಿಂದ 2016ರಲ್ಲಿ ಪ್ರಕರಣ ಖುಲಾಸೆಯಾಗಿತ್ತು. ನಂತರ ಅರುಣ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿ, 1 ಕೋಟಿ ರೂ. ಪರಿಹಾರ ನೀಡುವಂತೆ ಮನವಿ ಮಾಡಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ವೀರಣ್ಣ ಸೋಮಶೇಖರ್, ಪ್ರಕರಣ ದಾಖಲಿಸಿದ್ದ ಗೀತಾ, ಅರುಣ್ ನಾಗೇಗೌಡ ಹಾಗೂ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 7,62,268 ದಂಡ ವಿಧಿಸಿ, ಆ ಹಣದಲ್ಲಿ 5 ಲಕ್ಷ ರೂ.ಅನ್ನು ಸಂತ್ರಸ್ತ ಅರುಣ್ ಕುಮಾರ್ ಅವರಿಗೆ ನೀಡುವಂತೆ ತೀರ್ಪು ನೀಡಿದ್ದಾರೆ.