ಬೆಂಗಳೂರು: ವೈಯಾಲಿಕಾವಲ್ ನ ಮಹಾಲಕ್ಷ್ಮಿ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಮಹತ್ವದ ಮಾಹಿತಿ ನೀಡಿದ್ದಾರೆ.
ವೈಯಾಲಿಕಾವಲ್ ನಲ್ಲಿ ಮಹಿಳೆಯ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಯಾರು ಎಂಬ ಸ್ಪಷ್ಟವಾದ ಮಾಹಿತಿ ನಮಗೆ ಸಿಕ್ಕಿದೆ. ಆತನನ್ನು ಪತ್ತೆ ಹಚ್ಚಿ ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ. ಹೀಗಾಗಿ ಶೀಘ್ರ ಆತನ ಬಂಧನವಾಗುತ್ತದೆ. ಬಂಧನವಾದ ನಂತರ ಆತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಹೆಚ್ಚಿನ ಮಾಹಿತಿ ಕೊಡಬಹುದು. ಆತ ಹೊರ ರಾಜ್ಯದವನು ಎಂದು ಗೊತ್ತಾಗಿದೆ. ಆದರೆ ಈಗ ಬೆಂಗಳೂರಿನಲ್ಲಿ ವಾಸವಿದ್ದ. ಆತನ ಪತ್ತೆಗೆ ನಾವು ಈಗ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ವೈಯಾಲಿಕಾವಲ್ ನಲ್ಲಿ ಮಹಾಲಕ್ಷ್ಮಿ ಎಂಬ ಮಹಿಳೆಯನ್ನು ಹತ್ಯೆ ಮಾಡಿ ಮೃತದೇಹವನ್ನು ಪೀಸ್ ಪೀಸ್ ಮಾಡಿ ಫ್ರಿಡ್ಜ್ ನಲ್ಲಿಡಲಾಗಿತ್ತು. ಮೃತದೇಹ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಅದರಂತೆ ಕುಟುಂಬಸ್ಥರು ಬಂದು ನೋಡಿದಾಗ ಹತ್ಯೆಯಾಗಿರುವುದು ಗೊತ್ತಾಗಿದೆ.
ಇದೀಗ ಪೊಲೀಸರು ಮಹಾಲಕ್ಷ್ಮಿ ನಿಕಟವರ್ತಿಗಳನ್ನು ವಿಚಾರಣೆ ನಡೆಸಿದ್ದು, ಆಕೆಯ ಜೊತೆಗೆ ಆಪ್ತನಾಗಿದ್ದವನೇ ಮರ್ಡರ್ ಮಾಡಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನು, ಹತ್ಯೆ ಮಾಡಿದ ಬಳಿಕ ಆಕೆಯ ಮೃತದೇಹವನ್ನಿಟ್ಟಿದ್ದ ಫ್ರಿಡ್ಜ್ ನ್ನು ಈಗ ಎಫ್ಎಸ್ಎಲ್ ವರದಿಗಾಗಿ ಕಳುಹಿಸಲಾಗಿದೆ.