ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕರೆದಿದ್ದ ಮೂರು ರಾಜ್ಯದ ಮುಖ್ಯಮಂತ್ರಿಗಳ ಸಭೆ ರದ್ದಾಗಿಲ್ಲ. ನವೆಂಬರ್ 3 ಕ್ಕೆ ಮುಂದೂಡುವ ಸಾಧ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಸಲಹೆ ಮೇರಿಗೆ ಅಕ್ಟೋಬರ್ 21 ರಂದು ಮುಂಬೈನಲ್ಲಿ ಮೂರು ರಾಜ್ಯದ ಸಿಎಂಗಳ ಸಭೆ ಕರೆಯಲಾಗಿತ್ತು. ಆದರೆ, ಸಭೆ ದಿಢೀರ್ ರದ್ದಾಗಿದೆ ಎನ್ನುವ ವದಂತಿಗಳು ಕೇಳಿಬರುತ್ತಿವೆ. ಸಭೆ ರದ್ದಾಗಿಲ್ಲ. ಕೇವಲ ಮುಂದೂಡಲಾಗಿದೆ ಎಂದು ಹೇಳಿದರು.
ಗೋವಾ ಸಿಎಂ ವೈಯಕ್ತಿಕ ಕಾರಣಕ್ಕಾಗಿ ಸಭೆಯನ್ನು ಮುಂದೂಡುವಂತೆ ಮಹಾರಾಷ್ಟ್ರ ಸಿಎಂ ಅವರಲ್ಲಿ ಮನವಿ ಮಾಡಿದ್ದರು. ಅದರಂತೆ ಸಭೆಯನ್ನು ಮುಂದೂಡಲಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದು ಸಮಜಾಯಿಸಿ ಕೊಟ್ಟರು.
ಗೋವಾ ಕಾಂಗ್ರೆಸ್ ಪಕ್ಷ ಸಭೆಯಲ್ಲಿ ಭಾಗಿಯಾಗುವುದರ ಕುರಿತು ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ, ಗೋವಾ ಸಿಎಂ ಸಭೆಯಲ್ಲಿ ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಸಭೆ ಆದಷ್ಟು ಬೇಗ ನಡೆದು ಮಹದಾಯಿ ಸಮಸ್ಯೆ ಇತ್ಯರ್ಥವಾಗಲಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.