ಕುಣಿಗಲ್: ರಾಮನವಮಿ ಪಾನಕ ಸೇವಿಸಿ 42ಕ್ಕೂ ಅಧಿಕ ಮಂದಿ ವಾಂತಿ ಭೇದಿಯಾಗಿ ಅಸ್ವಸ್ಥಗೊಂಡಿರುವ ಘಟನೆ ತಾಲ್ಲೂಕಿನ ಮಂಗಳ ಗೊಲ್ಲರಹಟ್ಟಿ ನಡೆದಿದೆ.
ಅಸ್ವಸ್ಥರಾಗಿರುವವರನ್ನು ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡವತ್ತಿ ಗ್ರಾಮ ಸಮೀಪದ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ಮಜ್ಜಿಗೆ, ಪಾನಕ ವಿತರಣೆ ಮಾಡಲಾಗಿತ್ತು.
ಇದನ್ನು ಕುಡಿದ ಕೆಲವರಿಗೆ ಸಂಜೆಯಾಗುತ್ತಿದ್ದಂತೆ ವಾಂತಿ, ಭೇದಿಯಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲ್ಲೂಕು ಆರೋಗ್ಯ ಅಧಿಕಾರಿ ಮರಿಯಪ್ಪ, ಆಡಳಿತಾಧಿಕಾರಿ ಗಣೇಶಬಾಬು ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.
ಇನ್ನೂ ಘಟನೆಗೆ ದೋಷ ಪೂರಿತ ಪಾನಕ ಸೇವನೆಯೇ ಘಟನೆಗೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.