ಬೆಂಗಳೂರು: ವಿವಿಧ ಬೇಡಿಕೆಗಳನ್ನ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್‌ಟಿಸಿ ಕೇಂದ್ರ ಕಚೇರಿ ಮುಂಭಾಗದಲ್ಲಿ ನವೆಂಬರ್ 2 ರಿಂದ ಧರಣಿ ಆರಂಭಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಕೆಎಸ್ಆರ್‌ಟಿಸಿಯ ನಿಗಮದೊಳಗೆ ವರ್ಗಾವಣೆ, ಬಿಎಂಟಿಸಿ ಕಾರ್ಮಿಕರಿಗೆ 2015-16ನೇ ಸಾಲಿನ ಬೋನಸ್ ಮತ್ತು ಡಿಎ ಹಿಂಬಾಕಿ ಬಿಡುಗಡೆ, ನೌಕರರ ಅಮಾನತು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಫೆಡರೇಷನ್ ಆಗ್ರಹಿಸಿದೆ.
ಇನ್ನು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬಸ್‌ಗಳನ್ನು ಸ್ಥಗಿತಗೊಳಿಸದಿರಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ಸರ್ಕಾರ ಬಿಎಂಟಿಸಿಗೆ ಗುತ್ತಿಗೆ ಆಧಾರದ ಮೇಲೆ ಬಸ್ ಪಡೆಯಲು ನಿರ್ಧರಿಸಿದ್ದು, ಇದನ್ನು ಸರ್ಕಾರ ಹಿಂಪಡೆಯಬೇಕು. ನಾವು ಈಗಾಗಲೇ ನಮ್ಮ ಬೇಡಿಕೆಗಳನ್ನು ನೂತನ ಸಾರಿಗೆ ಸಚಿವರ ಗಮನಕ್ಕೆ ತಂದಿದ್ದೇವೆ. ಆದರೂ ಅವರು ಸ್ಪಂದಿಸಿಲ್ಲ. ಹೀಗಾಗಿ ಈ ರೀತಿ ಧರಣಿಗೆ ಮುಂದಾಗೋದು ಅನಿವಾರ್ಯವಾಗಿದೆ ಎಂದು ಕಾರ್ಮಿಕರು ಹೇಳಿದ್ದಾರೆ.
ನ. 2 ರಿಂದ ಪ್ರತಿಭಟನೆ ಆರಂಭವಾಗಲಿದ್ದು, ಸರ್ಕಾರ ಸ್ಪಂದಿಸದೇ ಹೋದರೆ ಧರಣಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.