ಬೆಂಗಳೂರು : ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಲಿರುವುದರ ಕುರಿತು ಕೋಟಾ ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಕುಡಿಯುವ ನೀರು, ಜಾನುವಾರುಗಳ ಮೇವು ಬ್ಯಾಂಕ್ ನಿರ್ಮಾಣ ಮಾಡಿಲ್ಲ. ಬರ ಪರಿಸ್ಥಿತಿಯನ್ನು ಸರಿಯಾದ ನಿರ್ವಹಣೆ ಮಾಡಿಲ್ಲ. ರಾಜ್ಯದಲ್ಲಿ ಕಣ್ಣೆದುರೇ ಇಂತಹ ಅನೇಕ ಸಮಸ್ಯೆಗಳಿವೆ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಗ್ರಾಮಗಳಿಗೆ ಹೋಗುವುದು ಹಾಸ್ಯಾಸ್ಪದವಲ್ಲವೆ ಎಂದು ವ್ಯಂಗ್ಯವಾಡಿದ್ದಾರೆ.
ಅಪರೇಷನ್ ಕಮಲದ ಬಗ್ಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಎರಡೂ ಪಕ್ಷಗಳು ಒಂದಾಗಿವೆ. ಮೈತ್ರಿಯಲ್ಲಿ ಅವರಲ್ಲೇ ಯಾರೊಬ್ಬರಿಗೂ ಸಮಾಧಾನವಿಲ್ಲ. ಹೊಂದಾಣಿಕೆ ಕೊರತೆಯಿಂದಲೇ ದೇವೇಗೌಡ ಮತ್ತು ಖರ್ಗೆ ಸೋಲನುಭವಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯಲ್ಲ. ಹೀಗಾಗಿ ನಾವು ಅಪರೇಷನ್ ಕಮಲ ಮಾಡುವ ಪ್ರಶ್ನೆಯೇ ಉದ್ಭವವಾಗಲ್ಲ ಎಂದು ತಿಳಿಸಿದ್ದಾರೆ.